Karnataka Weather: ಕರ್ನಾಟಕ ಹವಾಮಾನ; ಬೆಂಗಳೂರು ಬಿಸಿಲು ಹೆಚ್ಚಳ! ದಕ್ಷಿಣ ಕನ್ನಡ ಭಾಗದಲ್ಲಿ ಗುಡುಗು ಮಳೆ ಅಬ್ಬರ

Karnataka Weather: ಬಿರುಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆ ಸುರಿದು ತಂಪು ತಂದಿದೆ. ಹವಾಮಾನ ಇಲಾಖೆ ಫೆಬ್ರವರಿ 27ರವರೆಗೆ ಮಳೆಯ ಮುನ್ಸೂಚನೆ ನೀಡಿದೆ.

  • ದಕ್ಷಿಣ ಕನ್ನಡ ಭಾಗದಲ್ಲಿ ಮಳೆ, ಗುಡುಗು ಗಾಳಿ ಅಬ್ಬರ
  • ಬೆಳ್ತಂಗಡಿಯಲ್ಲಿ ಮರಗಳು ಬಿದ್ದು ಸಂಚಾರ ತೊಂದರೆ
  • ಫೆಬ್ರವರಿ 27ರವರೆಗೆ ಇನ್ನೂ 5 ದಿನ ಮಳೆ ಸಾಧ್ಯತೆ

ಬೆಂಗಳೂರು (Bengaluru) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಿನಗಳಿಂದ (Karnataka Weather) ಬಿರುಬಿಸಿಲು ಜನರನ್ನು ಕಂಗೆಡಿಸಿದ್ದರೂ, ನಿನ್ನೆ ಸಂಜೆ ಹೊತ್ತಿಗೆ ಮಳೆರಾಯನ (Rain Update) ಆಗಮನ ತಂಪಿನ ನೆಮ್ಮದಿಯನ್ನು ತಂದಿತು. ದಿನಪೂರ್ತಿ ಉರಿಯುತ್ತಿದ್ದ ಬಿಸಿಲಿನ ನಂತರ ಗುಡುಗು ಸಹಿತ ಸುರಿದ ಮಳೆ ಜನರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.

ಸುಳ್ಯ ತಾಲೂಕಿನ ಕಲ್ಮಕಾರು, ಗುತ್ತಿಗಾರು, ಬಾಳುಗೋಡು, ಸಂಪಾಜೆ ಹಾಗೂ ಕಲ್ಲಗುಂಡಿ ಭಾಗಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಕಡಬ ತಾಲೂಕಿನ ಬಲ್ಯದಲ್ಲಿ ಭಾರೀ ಗಾಳಿ ಮಳೆಗೆ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು. ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಕುದುರೆಮುಖ ಮತ್ತು ಗುರುವಾಯನಕೆರೆ ಭಾಗಗಳಲ್ಲೂ ಮಳೆಯ ಅಬ್ಬರ ಕಂಡುಬಂದಿದೆ.

ವಾಯುಭಾರ ಕುಸಿತದ ಪರಿಣಾಮ

ಬಂಗಾಳಕೊಲ್ಲಿಯ ಉತ್ತರ ಶ್ರೀಲಂಕಾ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಫೆಬ್ರವರಿ 27ರವರೆಗೆ ಮಳೆ ಕಾಣಿಸಬಹುದು. ಆದರೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ.

ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿಯೂ ಬೆಳಿಗ್ಗೆ ಬಿಸಿಲು ತೀವ್ರವಾಗಿದ್ದರೂ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ದಾಖಲಾಗಿದೆ.

ಬೆಂಗಳೂರು ಒಣಹವೆಯ ಎಚ್ಚರಿಕೆ

ಇನ್ನೊಂದೆಡೆ, ರಾಜ್ಯದ ಒಳನಾಡು ಭಾಗಗಳಲ್ಲಿ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38–39 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಚಾಮರಾಜನಗರ, ಮೈಸೂರು, ಮಂಡ್ಯ, ಶಿವಮೊಗ್ಗ, ತುಮಕೂರು ಸೇರಿದಂತೆ ಹಲವೆಡೆ ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಬಿಸಿಲಿನ ನಡುವೆ ಮಳೆ ತಂದ ತಂಪು ಜನರಿಗೆ ಸ್ವಲ್ಪ ನೆಮ್ಮದಿ ನೀಡಿದರೂ, ಮುಂದಿನ ದಿನಗಳ ಹವಾಮಾನ ಬದಲಾವಣೆ ಕುರಿತು ಕಾದು ನೋಡಬೇಕಾಗಿದೆ.

Related Stories