ಗಣೇಶ ಹಬ್ಬ : ಪ್ರಯಾಣಿಕರ ಸುರಕ್ಷತೆಗೆ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ
ಗೌರಿ-ಗಣೇಶ ಹಬ್ಬದ ಹಿನ್ನೆಲೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರ್‌ಪಿಎಫ್ ಸಿಬ್ಬಂದಿ ಗಸ್ತು, ಸಿಸಿಟಿವಿ ನಿಗಾ ಹಾಗೂ ಶ್ವಾನದಳ ತಪಾಸಣೆ ಹೆಚ್ಚಿಸಿದ್ದಾರೆ.

ಬೆಂಗಳೂರು/ಹುಬ್ಬಳ್ಳಿ (Bengaluru): ಗೌರಿ-ಗಣೇಶ ಹಬ್ಬದ (Gowri-Ganesha Festival) ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ರಕ್ಷಣಾ ಪಡೆ (RPF) ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹಬ್ಬದ ದಿನಗಳಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆ ಇರುವುದರಿಂದ ಪ್ಲಾಟ್‌ಫಾರ್ಮ್‌ಗಳು, ನಿಲ್ದಾಣದ ಆವರಣ, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ಜನಸಂದಣಿ ಹೆಚ್ಚಾಗುವ ಸಂದರ್ಭದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಕಳ್ಳತನ, ಜೇಬು ಕಳ್ಳತನ, ಅನಧಿಕೃತ ಪ್ರವೇಶ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಸಿಬ್ಬಂದಿ ಹೆಚ್ಚಿನ ಗಮನ ಹರಿಸಲಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಯಾವುದೇ ಬೆಳವಣಿಗೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಇದರ ಜೊತೆಗೆ ರೈಲು ನಿಲ್ದಾಣಗಳಲ್ಲಿ ಅಳವಡಿಸಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ಮೂಲಕ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು, ಮಾಲೀಕರಿಲ್ಲದ ಲಗೇಜ್ ಹಾಗೂ ಜನದಟ್ಟಣೆಯ ಪರಿಸ್ಥಿತಿಯನ್ನು ಗಮನಿಸಿ ಅಗತ್ಯವಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ವಿಧ್ವಂಸಕ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ಪ್ರಮುಖ ನಿಲ್ದಾಣಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಆರ್‌ಪಿಎಫ್ ಶ್ವಾನದಳವನ್ನು (Dog Squad) ಬಳಸಲಾಗುತ್ತಿದೆ. ಅನುಮಾನಾಸ್ಪದ ವಸ್ತುಗಳ ಪತ್ತೆ ಹಾಗೂ ಭದ್ರತಾ ತಪಾಸಣೆಗಾಗಿ ಇತರ ಭದ್ರತಾ ಸಂಸ್ಥೆಗಳೊಂದಿಗೂ ಸಮನ್ವಯ ಸಾಧಿಸಲಾಗಿದೆ.
ಜನಸಂದಣಿ ನಿರ್ವಹಣೆಗೂ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರಯಾಣಿಕರು ಸರತಿ ಹಾಗೂ ನಿಗದಿತ ಮಾರ್ಗಗಳಲ್ಲಿ ಸಂಚರಿಸುವಂತೆ ಸಿಬ್ಬಂದಿ ಸೂಚನೆ ನೀಡಲಿದ್ದಾರೆ. ರಾಜ್ಯ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಆರ್‌ಪಿಎಫ್ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ.
ಪ್ರಯಾಣಿಕರು ಕೂಡ ತಮ್ಮ ಮೊಬೈಲ್, ಹಣ, ಬ್ಯಾಗ್ ಸೇರಿದಂತೆ ವೈಯಕ್ತಿಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಯಾವುದೇ ಲಗೇಜ್ ಅನ್ನು ನಿಲ್ದಾಣದಲ್ಲಿ ನಿರ್ಲಕ್ಷ್ಯವಾಗಿ ಬಿಟ್ಟು ಹೋಗದಂತೆ ಸೂಚಿಸಲಾಗಿದೆ.
ಅನುಮಾನಾಸ್ಪದ ವಸ್ತು, ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದರೆ ಕೂಡಲೇ ರೈಲ್ವೆ ಸಹಾಯವಾಣಿ 139ಕ್ಕೆ (Railway Helpline) ಮಾಹಿತಿ ನೀಡುವಂತೆ ಅಥವಾ ಸಮೀಪದಲ್ಲಿರುವ ಆರ್‌ಪಿಎಫ್/ಜಿಆರ್‌ಪಿ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಈ ಕುರಿತು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ.ಎನ್. (Pranesh K.N.) ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.



