ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ! ರಸ್ತೆಗೆ ಬಿದ್ದವರ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವು
ಚಿಕ್ಕಮಗಳೂರಿನ ಕಡೂರು ತಾಲೂಕಿನ ಹಳೆಹಟ್ಟಿ ಗೇಟ್ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು Chikkamagaluru): ಎರಡು ಬೈಕ್‌ಗಳ (Bikes) ನಡುವೆ ಮುಖಾಮುಖಿ ಡಿಕ್ಕಿ (Head-on Collision) ಸಂಭವಿಸಿ ರಸ್ತೆಗೆ ಬಿದ್ದ ಸವಾರರ ಮೇಲೆ ಹಿಂದಿನಿಂದ ಬಂದ ಸರ್ಕಾರಿ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕಡೂರು ತಾಲೂಕಿನ ಹಳೆಹಟ್ಟಿ ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಇಬ್ಬರು ಸವಾರರು ರಾಜಸ್ಥಾನ ಮೂಲದವರು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಆದರೆ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿಯ ಪ್ರಕಾರ, ಕಡೂರಿನಿಂದ ಚಿಕ್ಕಮಗಳೂರು ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹಳೆಹಟ್ಟಿ ಗೇಟ್ ಸಮೀಪ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ.
ಡಿಕ್ಕಿಯ ರಭಸಕ್ಕೆ ಬೈಕ್‌ಗಳಲ್ಲಿದ್ದ ಸವಾರರು ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಸರ್ಕಾರಿ ಬಸ್ (Government Bus) ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಸವಾರರ ಮೇಲೆ ಹರಿದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣ ಕಡೂರು ಸರ್ಕಾರಿ ಆಸ್ಪತ್ರೆಗೆ (Kadur Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ (Sakharayapatna Police Station) ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



