ಜಮೀನು ವಿಚಾರಕ್ಕೆ ಚಿಕ್ಕಪ್ಪನಿಗೆ ಚಾಕು ಇರಿದ ಯುವಕ! ಶಿವಮೊಗ್ಗದಲ್ಲಿ ಘಟನೆ

ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಯುವಕನೊಬ್ಬ ಚಿಕ್ಕಪ್ಪನಿಗೆ ಚಾಕುವಿನಿಂದ ಇರಿದ ಆರೋಪ ಕೇಳಿಬಂದಿದೆ.

  • ಜಮೀನು ವಿಚಾರಕ್ಕೆ ಕುಟುಂಬದೊಳಗೆ ಗಲಾಟೆ
  • ಚಿಕ್ಕಪ್ಪನಿಗೆ ಚಾಕು ಇರಿತ; ಗಂಭೀರ ಗಾಯ
  • ಶಿವಮೊಗ್ಗದಲ್ಲಿ ಘಟನೆ; ಇಬ್ಬರು ಆರೋಪಿಗಳು ವಶಕ್ಕೆ

ಶಿವಮೊಗ್ಗ (Shivamogga): ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಸಹೋದರರ ಕುಟುಂಬಗಳ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಯುವಕನೊಬ್ಬ ತನ್ನ ಚಿಕ್ಕಪ್ಪನಿಗೆ ಚಾಕುವಿನಿಂದ ಹಲವು ಬಾರಿ ಇರಿದಿರುವ ಆರೋಪ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಕೇಳಿಬಂದಿದೆ.

ಪುರದಾಳು ಗ್ರಾಮದ ನಿವಾಸಿ ಶ್ರೀನಿವಾಸ್ (Srinivas) (52) ಚಾಕು ಇರಿತಕ್ಕೊಳಗಾದವರು. ಅವರ ಸಹೋದರ ರಾಜಪ್ಪ ಹಾಗೂ ಶ್ರೀನಿವಾಸ್ ನಡುವೆ ಜಮೀನಿನ ಗಡಿ ಮತ್ತು ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರವಾಗಿ ಹಿಂದಿನಿಂದಲೂ ವಿವಾದವಿತ್ತು ಎನ್ನಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಶ್ರೀನಿವಾಸ್ ಹಾಗೂ ಅವರ ಪತ್ನಿ ಶಶಿಕಲಾ ಅಡಿಕೆ ತೋಟಕ್ಕೆ ನೀರು ಹಾಯಿಸುತ್ತಿದ್ದರು. ಈ ವೇಳೆ ರಾಜಪ್ಪ ಹಾಗೂ ಅವರ ಪತ್ನಿ ನೀರು ಹಾಯಿಸುತ್ತಿರುವುದನ್ನು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಶ್ರೀನಿವಾಸ್ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಸ್ಥಳಕ್ಕೆ ಬಂದ ರಾಜಪ್ಪ ಅವರ ಪುತ್ರ ಮಂಜುನಾಥ್ (Manjunath) ಕಾರಿನಿಂದ ಇಳಿದು ಚಾಕು ತೆಗೆದುಕೊಂಡು ಶ್ರೀನಿವಾಸ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಎದೆ, ಪಕ್ಕೆಲುಬು ಹಾಗೂ ತೊಡೆಯ ಭಾಗಕ್ಕೆ ಚಾಕು ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಲಾಟೆ ಬಿಡಿಸಲು ಮುಂದಾದ ಶ್ರೀನಿವಾಸ್ ಅವರ ಪತ್ನಿ ಶಶಿಕಲಾ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಗಾಯಗೊಂಡ ಇಬ್ಬರನ್ನೂ ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ (McGann Hospital) ದಾಖಲಿಸಲಾಗಿತ್ತು. ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನೆಗೆ ಸಂಬಂಧಿಸಿ ತುಂಗಾನಗರ ಠಾಣೆ ಪೊಲೀಸರು (Tunganagar Police Station) ರಾಜಪ್ಪ ಹಾಗೂ ಮಂಜುನಾಥ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ರಾಜಪ್ಪ, ಮಂಜುನಾಥ್, ಶಾಂತಮ್ಮ ಹಾಗೂ ಅರ್ಪಿತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿಚಾರವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories