ಚಿನ್ನ ಕಳವು ಆರೋಪ: ವಿಚಾರಣೆ ವೇಳೆ ಮಹಿಳೆಗೆ ಕರೆಂಟ್ ಶಾಕ್ ನೀಡಿದ ಪೊಲೀಸರು

ಹಾವೇರಿ ಶಿಗ್ಗಾಂವಿಯ ಶಿಡ್ಲಾಪುರದಲ್ಲಿ ವರಮಹಾಲಕ್ಷ್ಮಿ ಪೂಜೆ ವೇಳೆ 45 ಗ್ರಾಂ ಚಿನ್ನದ ಸರ ನಾಪತ್ತೆಯಾಗಿದ್ದು, ವಿಚಾರಣೆ ವೇಳೆ ಮಹಿಳೆಗೆ ಪೊಲೀಸರು ವಿದ್ಯುತ್ ಶಾಕ್ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಹಾವೇರಿ (Haveri): ವರಮಹಾಲಕ್ಷ್ಮಿ ಪೂಜೆಗೆ (Varamahalakshmi Puja) ತೆರಳಿದ್ದ ಮಹಿಳೆಯೊಬ್ಬರಿಗೆ ಚಿನ್ನದ ಸರ ಕಳವು ಪ್ರಕರಣದ ವಿಚಾರಣೆ ನೆಪದಲ್ಲಿ ಪೊಲೀಸರು ಕರೆಂಟ್ ಶಾಕ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಕೇಳಿಬಂದಿದೆ. ಅಸ್ವಸ್ಥಗೊಂಡಿರುವ ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್ 20ರಂದು ಶಿಡ್ಲಾಪುರ ಗ್ರಾಮದ ನಾಗರಾಜ್ ಸುಂಕದ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬಿಸಿ ಕಳುಹಿಸಲಾಗಿತ್ತು. ಪೂಜೆ ಮುಗಿದ ಬಳಿಕ ದೇವಿಗೆ ಹಾಕಲಾಗಿದ್ದ ಸುಮಾರು 45 ಗ್ರಾಂ ಚಿನ್ನದ ಸರ (Gold Chain) ಕಾಣೆಯಾಗಿರುವುದು ಕುಟುಂಬದ ಗಮನಕ್ಕೆ ಬಂದಿದೆ.

ಚಿನ್ನ ಕಳುವಾಗಿರುವ ಬಗ್ಗೆ ಕುಟುಂಬಸ್ಥರು ಬಂಕಾಪುರ ಪೊಲೀಸರಿಗೆ (Bankapur Police) ಮಾಹಿತಿ ನೀಡಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಪೂಜೆಗೆ ಬಂದಿದ್ದ ಹಲವು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟು 11 ಮಂದಿಯನ್ನು ವಿಚಾರಣೆಗಾಗಿ ಕರೆಸಿ ಬಳಿಕ ಕಳುಹಿಸಲಾಗಿದೆ ಎನ್ನಲಾಗಿದ್ದು, ಈ ಪೈಕಿ ಇಬ್ಬರು ಮಹಿಳೆಯರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ನೀಲವ್ವ ಓಲೇಕಾರ ಸೇರಿದಂತೆ ಇಬ್ಬರು ಮಹಿಳೆಯರಿಗೆ ಕೈ ಮತ್ತು ತಲೆಯ ಭಾಗಕ್ಕೆ ವಿದ್ಯುತ್ ಶಾಕ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಪೂಜೆಗೆ ತೆರಳಿದ್ದ ನೀಲವ್ವ ಓಲೇಕಾರ ಅವರು ತಮ್ಮ ಮೇಲಾದ ಆರೋಪಗಳನ್ನು ನಿರಾಕರಿಸಿದ್ದಾರೆ. “ಪೂಜೆಗೆ ಬನ್ನಿ ಎಂದು ಕರೆದಿದ್ದರಿಂದ ಹೋಗಿ ವಾಪಸ್ ಬಂದಿದ್ದೆ. ಕಳ್ಳತನದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುವ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ನನಗೆ ಕರೆಂಟ್ ಶಾಕ್ ನೀಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಇನ್ನೊಬ್ಬ ಮಹಿಳೆಗೂ ವಿದ್ಯುತ್ ಶಾಕ್ ನೀಡಿದ್ದಲ್ಲದೆ ಹಲ್ಲೆ ನಡೆಸಲಾಗಿದೆ ಎಂದು ನೀಲವ್ವ ಆರೋಪಿಸಿದ್ದಾರೆ. ತಾವು ಬಡವರಾಗಿದ್ದು ಯಾವುದೇ ಕಳ್ಳತನ ಮಾಡಿಲ್ಲ ಎಂದು ಮನವಿ ಮಾಡಿಕೊಂಡರೂ ತಮ್ಮನ್ನು ಬಿಡದೆ ಕಿರುಕುಳ ನೀಡಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಘಟನೆಯಿಂದ ಅಸ್ವಸ್ಥಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಗಳು ಸತ್ಯವೇ ಎಂಬುದನ್ನು ತನಿಖೆಯ ಬಳಿಕವೇ ಖಚಿತಪಡಿಸಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಯಶೋಧಾ ವಂಟಗೋಡಿ (Yashodha Vantagodi), ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories