ಸ್ಕೂಟಿಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ! ಗೃಹಿಣಿ ಸ್ಥಳದಲ್ಲೇ ಸಾವು
ಹಾಸನದ ಎನ್.ಆರ್. ವೃತ್ತದಲ್ಲಿ ಸ್ಕೂಟಿಗೆ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗೃಹಿಣಿ ಮೃತಪಟ್ಟಿದ್ದು, ಸ್ನೇಹಿತೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸನ (Hassan): ನಗರದ ಎನ್.ಆರ್. ವೃತ್ತದಲ್ಲಿ (N.R. Circle) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) 31 ವರ್ಷದ ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ (KSRTC Bus) ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣಾ ಡಿ.ಜೆ. (Aparna D.J.) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಪತಿ ಯೋಗೀಶ್ ಅವರೊಂದಿಗೆ ವಾಸವಾಗಿದ್ದ ಅಪರ್ಣಾ, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತವರು ಮನೆಗೆ ಬಂದಿದ್ದರು.
ಶನಿವಾರ ಆಸ್ಪತ್ರೆಗೆ ಸಂಬಂಧಿಸಿದ ಕೆಲಸಕ್ಕಾಗಿ ಹಾಸನ ನಗರಕ್ಕೆ ಬಂದಿದ್ದ ಅವರು, ಸ್ನೇಹಿತೆ ರಕ್ಷಿತಾ ಜೊತೆ ಸ್ಕೂಟಿಯಲ್ಲಿ ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸಾರಿಗೆ ಬಸ್ ಅವರ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಅಪರ್ಣಾ ಮತ್ತು ರಕ್ಷಿತಾ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅಪರ್ಣಾ ಬಸ್‌ನ ಚಕ್ರದ ಕೆಳಗೆ ಸಿಲುಕಿಕೊಂಡಿದ್ದು, ಬಸ್ ಅವರನ್ನು ಸ್ವಲ್ಪ ದೂರ ಎಳೆದೊಯ್ದಿದೆ ಎಂದು ತಿಳಿದುಬಂದಿದೆ. ಕೂಡಲೇ ಸ್ಥಳದಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ.
ಆಟೋ ಚಾಲಕ ಕುಮಾರ್ ಅವರು ಅಪರ್ಣಾ ಅವರನ್ನು ಬಸ್‌ನ ಚಕ್ರದಿಂದ ಹೊರತೆಗೆದು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಕ್ಷಿತಾ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಬಸ್ ಚಾಲಕ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದ್ದು, ಚಾಲಕನ ನಿರ್ಲಕ್ಷ್ಯದ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪರ್ಣಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತದ ಬಳಿಕ ಮೃತ ಅಪರ್ಣಾ ಅವರ ಎರಡು ಎಳೆ ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿರುವ ಬಗ್ಗೆಯೂ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಬೇಕಿದೆ.
ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಹಾಸನ ಸಂಚಾರಿ ಪೊಲೀಸ್ ಠಾಣೆ (Traffic Police) ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ನಿಖರ ಕಾರಣ ಹಾಗೂ ಇತರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.



