ರೈಲಿನ ಬೋಗಿಯಲ್ಲಿ ಮಹಿಳೆಯ ಅರೆಬೆತ್ತಲೆ ಶವ ಪತ್ತೆ! ಅತ್ಯಾಚಾರ ಎಸಗಿ ಕೊಲೆ ಶಂಕೆ
ಸೊಲ್ಲಾಪುರದಿಂದ ಧಾರವಾಡಕ್ಕೆ ಬಂದ ರೈಲಿನ ಮಹಿಳಾ ಬೋಗಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಘಟನೆ ಕುರಿತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- ಮಹಿಳಾ ಬೋಗಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
- ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುವ ಸಾಧ್ಯತೆ
- ಮೃತ ಮಹಿಳೆಯ ಗುರುತು ಪತ್ತೆಹಚ್ಚಲು ತನಿಖೆ ಶುರು
ರೈಲಿನ ಮಹಿಳಾ ಬೋಗಿಯಲ್ಲಿ ಶವ ಪತ್ತೆ
ಧಾರವಾಡ (Dharwad): ಸೊಲ್ಲಾಪುರದಿಂದ ಧಾರವಾಡಕ್ಕೆ ಆಗಮಿಸಿದ ರೈಲಿನ ಮಹಿಳಾ ಬೋಗಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವ (Woman Body Found) ಘಟನೆ ಆತಂಕಕ್ಕೆ ಕಾರಣವಾಗಿದೆ. ಅರೆಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ಹೊರಟಿದ್ದ ರೈಲು ಬೆಳಗ್ಗೆ ಧಾರವಾಡಕ್ಕೆ ತಲುಪಿತ್ತು. ರೈಲು ನಿಲ್ದಾಣಕ್ಕೆ ಬಂದ ಬಳಿಕ ಬೋಗಿ ಸ್ವಚ್ಛಗೊಳಿಸಲು ರೈಲ್ವೆ ಸಿಬ್ಬಂದಿ ತೆರಳಿದಾಗ ಮಹಿಳೆಯ ಮೃತದೇಹ ಕಂಡುಬಂದಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯ ಶವ ರೈಲಿನ ಕೊನೆಯ ಭಾಗದಲ್ಲಿದ್ದ ಮಹಿಳಾ ಬೋಗಿಯಲ್ಲಿ (Women’s Coach) ಪತ್ತೆಯಾಗಿದೆ. ಮೃತದೇಹದ ಸ್ಥಿತಿಯನ್ನು ಗಮನಿಸಿದ ಪೊಲೀಸರು, ಮಹಿಳೆಯ ಸಾವಿನ ಹಿಂದೆ ಅಪರಾಧ ನಡೆದಿರುವ ಸಾಧ್ಯತೆಯನ್ನೂ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ರಾತ್ರಿ ರೈಲು ಸಂಚಾರದಲ್ಲಿದ್ದ ವೇಳೆಯೇ ನಡೆದಿರಬಹುದೇ ಎಂಬ ಅನುಮಾನವೂ ಮೂಡಿದೆ. ಆದರೆ ಸಾವಿನ ನಿಖರ ಸಮಯ, ಕಾರಣ ಹಾಗೂ ಮಹಿಳೆಯ ಮೇಲೆ ಯಾವುದೇ ದೌರ್ಜನ್ಯ ನಡೆದಿದೆಯೇ ಎಂಬುದು ಸದ್ಯ ಖಚಿತವಾಗಿಲ್ಲ.
ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಹಾಗೂ ಲಭ್ಯವಿರುವ ಇತರ ಮಾಹಿತಿಯನ್ನು ಆಧರಿಸಿ ಪೊಲೀಸರು (Police Investigation) ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯ ಗುರುತು ಪತ್ತೆಯಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ಮಾಹಿತಿ ಹೊರಬರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆ ಸೇರಿದಂತೆ ತನಿಖಾ ಪ್ರಕ್ರಿಯೆಯ ಬಳಿಕವೇ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ.



