ಶ್ರಾವಣ ಶನಿವಾರ: ದೇವಸ್ಥಾನಕ್ಕೆ ದೀಪಾಲಂಕಾರ ಮಾಡುವಾಗ ಬಿದ್ದು ಯುವಕ ಸಾವು!

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ದೇವಾಲಯದ ಗೋಪುರಕ್ಕೆ ವಿದ್ಯುತ್ ದೀಪ ಅಳವಡಿಸುತ್ತಿದ್ದ ಯುವಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಶ್ರಾವಣ ಶನಿವಾರದ (Shravana Saturday) ಸಿದ್ಧತೆ ವೇಳೆ ದಾರುಣ ಘಟನೆ ನಡೆದಿದೆ. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ (Electrical Decoration) ಮಾಡುತ್ತಿದ್ದ ಯುವಕ ಗೋಪುರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹ್ಮತ್ ಮೃತ ಯುವಕ. ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಕಾರ್ಯಕ್ರಮಕ್ಕಾಗಿ ವಿಶೇಷ ದೀಪಾಲಂಕಾರ ಕಾರ್ಯ ನಡೆಯುತ್ತಿತ್ತು.

ದೇವಾಲಯದ ಸುತ್ತಮುತ್ತ ದೀಪಗಳನ್ನು ಅಳವಡಿಸಿದ ಬಳಿಕ ರಹ್ಮತ್ ಗೋಪುರದ ಮೇಲ್ಭಾಗದಲ್ಲೂ ವಿದ್ಯುತ್ ದೀಪಗಳನ್ನು ಅಳವಡಿಸುವ ಕೆಲಸದಲ್ಲಿ ತೊಡಗಿದ್ದರು. ಅಲಂಕಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕೆಲಸ ಮಾಡುತ್ತಿದ್ದ ವೇಳೆ ರಹ್ಮತ್ ಅವರ ಕಾಲು ಆಕಸ್ಮಿಕವಾಗಿ ಜಾರಿ, ಗೋಪುರದಿಂದ ಕೆಳಗೆ ಬಿದ್ದಿದ್ದಾರೆ. ಎತ್ತರದಿಂದ ಬಿದ್ದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲು ಮುಂದಾಗಿದ್ದಾರೆ.

ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ರಹ್ಮತ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ದೇವಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದೇವಾಲಯದ ಟ್ರಸ್ಟ್ ವತಿಯಿಂದ ದೀಪಾಲಂಕಾರದ ಕೆಲಸವನ್ನು ರಹ್ಮತ್ ಅವರಿಗೆ ವಹಿಸಲಾಗಿತ್ತು ಎಂದು ತಿಳಿದುಬಂದಿದೆ. ದಿನಗೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದ ಅವರು ಕುಟುಂಬದ ಪ್ರಮುಖ ಆಧಾರವಾಗಿದ್ದರು.

ಸುಮಾರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ರಹ್ಮತ್ ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಅಕಾಲಿಕ ಸಾವಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳ ಬದುಕಿನ ಮೇಲೆ ದೊಡ್ಡ ಹೊರೆ ಬಿದ್ದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (Police Case) ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ದೀಪಾಲಂಕಾರ ಕೆಲಸದ ವೇಳೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆಯೂ ತನಿಖೆಯಲ್ಲಿ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories