ಭಯಾನಕ ವಿಡಿಯೋ; 16ರ ಬಾಲಕಿಯನ್ನು ಗುಂಡಿಕ್ಕಿ ಕೊಂದ 10 ವರ್ಷದ ಬಾಲಕ
ಅಮೆರಿಕದಲ್ಲಿ ಹ್ಯಾಲೋವೀನ್ ಆಚರಣೆಯ ವೇಳೆ ನಡೆದ ಸಣ್ಣ ಜಗಳ ಭೀಕರ ದುರಂತಕ್ಕೆ ಕಾರಣವಾಗಿದೆ. ಜೋರಾಗಿ ಹಾಡು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯಗೊಂಡಿದೆ.

- ಹಾಡಿನ ಸದ್ದಿಗೆ ಎರಡು ಕುಟುಂಬಗಳ ನಡುವೆ ಗಲಾಟೆ
- ತಾಯಿಯ ಸೂಚನೆಯಂತೆ ಪಿಸ್ತೂಲ್ ತಂದ ಬಾಲಕ
- ಬಾಲಕಿ ಸಾವು, ತಾಯಿ ಬಂಧನ
ಅಮೆರಿಕದ ನ್ಯೂ ಮೆಕ್ಸಿಕೋ (New Mexico) ರಾಜ್ಯದ ಆಲ್ಬುಕರ್ಕ್‌ನಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೇವಲ ಜೋರಾಗಿ ಸಂಗೀತ ಹಾಕಿದ ವಿಚಾರಕ್ಕೆ ಆರಂಭವಾದ ಜಗಳದಲ್ಲಿ 16 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಕೃತ್ಯದಲ್ಲಿ 10 ವರ್ಷದ ಬಾಲಕ ಭಾಗಿಯಾಗಿರುವುದು ಮತ್ತಷ್ಟು ಆಘಾತ ಮೂಡಿಸಿದೆ.
ಅಕ್ಟೋಬರ್ 31ರಂದು ಹ್ಯಾಲೋವೀನ್ (Halloween) ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೆರೆಮನೆಯವರು ಜೋರಾಗಿ ಹಾಡು ಹಾಕಿದ್ದಕ್ಕೆ 40 ವರ್ಷದ ಎಲೈನಾ ಗೊಮೆಜ್-ವಿಲ್ಲೆಡಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ 16 ವರ್ಷದ ಕೀನರ್ಲೀನ್ ಪ್ಲಾಜಾ ರಾಂಗೆಲ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವಿನ ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಗಲಾಟೆ ನಡೆಯುತ್ತಿದ್ದಾಗ ಎಲೈನಾ ತನ್ನ 10 ವರ್ಷದ ಮಗನಿಗೆ ಮನೆಯೊಳಗಿನಿಂದ ಪಿಸ್ತೂಲ್ ತರುವಂತೆ ಸೂಚಿಸಿದ್ದಾಳೆ ಎನ್ನಲಾಗಿದೆ. ತಾಯಿಯ ಮಾತಿನಂತೆ ಬಂದೂಕು ತಂದ ಬಾಲಕ, ಜಗಳ ನಡೆಯುತ್ತಿದ್ದವರತ್ತ ಗುರಿ ಇಟ್ಟಿದ್ದಾನೆ. ಈ ವೇಳೆ ಎಲೈನಾ ಕೂಡ ಬಾಲಕ ಗುಂಡು ಹಾರಿಸಬಹುದು ಎಂದು ಎಚ್ಚರಿಸಿದ್ದಾಳೆ. ಆದರೆ ಅಷ್ಟರಲ್ಲೇ ಬಾಲಕ ಎರಡು ಸುತ್ತು ಗುಂಡು ಹಾರಿಸಿದ್ದು, ಗುಂಡೇಟಿಗೆ ಕೀನರ್ಲೀನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮಗಳ ಮೇಲಿನ ಗುಂಡಿನ ದಾಳಿಯನ್ನು ಕಂಡ ತಂದೆ ಕೀನರ್ ಪ್ಲಾಜಾ ಆಕ್ರೋಶಗೊಂಡು ಆರೋಪಿತೆಯ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಎಲೈನಾ ಬಾಲಕನ ಕೈಯಲ್ಲಿದ್ದ ಪಿಸ್ತೂಲ್ ಪಡೆದು ಅವರ ಮೇಲೂ ಗುಂಡು ಹಾರಿಸಿದ್ದಾಳೆ ಎಂದು ವರದಿಯಾಗಿದೆ.
ಘಟನೆ ನಡೆದ ಬಳಿಕ ಎಲೈನಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಬಾಲಕಿಯ ಮೃತದೇಹ ಮತ್ತು ಎಲೈನಾ ಕೈಯಲ್ಲಿದ್ದ ಪಿಸ್ತೂಲ್ ಕಂಡುಬಂದಿದೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಆಕೆಯತ್ತ ಎರಡು ಸುತ್ತು ಗುಂಡು ಹಾರಿಸಿದರೂ, ಅವು ಅಪಾರ್ಟ್‌ಮೆಂಟ್‌ನ ಹೊರಗಿನ ಗೋಡೆಗೆ ತಗುಲಿವೆ.
ಮಗಳನ್ನು ಕಳೆದುಕೊಂಡ ಕುಟುಂಬ ಈಗ ತೀವ್ರ ದುಃಖದಲ್ಲಿದೆ. ತನ್ನ ಮಗಳು ಬೆಳೆದು ದೊಡ್ಡವಳಾಗುವುದನ್ನು ನೋಡುವ ಕನಸು ಕಂಡಿದ್ದೆವು. ಆದರೆ ಕ್ಷುಲ್ಲಕ ವಿಚಾರಕ್ಕೆ ಆಕೆಯನ್ನು ಕಳೆದುಕೊಳ್ಳಬೇಕಾಯಿತು ಎಂದು ತಂದೆ ಕಣ್ಣೀರಿಟ್ಟಿದ್ದಾರೆ.
ಸದ್ಯ ಎಲೈನಾಳನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ಧ ಎರಡನೇ ದರ್ಜೆಯ ಕೊಲೆ (Second-Degree Murder) ಪ್ರಕರಣ ದಾಖಲಿಸಲಾಗಿದೆ. ಇತ್ತ ಗುಂಡು ಹಾರಿಸಿದ ಬಾಲಕನಿಗೆ ಕೇವಲ 10 ವರ್ಷ ವಯಸ್ಸಾಗಿರುವುದರಿಂದ ಆತನ ವಿರುದ್ಧದ ಮುಂದಿನ ಕಾನೂನು ಕ್ರಮದ ಬಗ್ಗೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. 12 ವರ್ಷ ತುಂಬುವವರೆಗೆ ಆತನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಆಲ್ಬುಕರ್ಕ್ ಪೊಲೀಸ್ ಮುಖ್ಯಸ್ಥೆ ಸೆಸಿಲಿ ಬಾರ್ಕರ್ ತಿಳಿಸಿದ್ದಾರೆ.
ABD’de 40 yaşındaki Elaina Gomez-Villeda’nın 10 yaşındaki oğlu, komşular arasındaki bir kavga sırasında kendi dairelerinden tabancayı alıp iki el ateş etti. Kurşunlardan biri 16 yaşındaki Keinerlien Rangel’ın başına isabet etti.
Kadın 911’i aradı. Polis geldiğinde hâlâ elinde silahla duruyor, memurlara doğru tutup bir kez ateş ediyordu. Karşılık olarak bir polis iki el ateş etti, ikisi de isabet etmedi.
Tuhaf olan şu ki, cinayet silahını ateşleyen çocuk ne gözaltına alındı ne de suçlandı. Yaşı küçük olduğu için çocuk koruma birimine teslim edildi. Annesi ise ikinci derece cinayetten ve silahı çocuğa erişilebilir kılmaktan yargılanıyor.
— Serkan Tanyildizi (@srkntnyldz) November 20, 2026



