ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ಸಾವು

ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಈಜಲು ತೆರಳಿದ್ದ 20 ವರ್ಷದ ಹರ್ಷ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನೇಹಿತರೊಂದಿಗೆ ಕೆರೆಗೆ ಬಂದಿದ್ದ ಯುವಕನ ಮೃತದೇಹವನ್ನು ಮುಳುಗು ತಜ್ಞರ ನೆರವಿನಿಂದ ಹೊರತೆಗೆಯಲಾಗಿದೆ.

ಬೆಂಗಳೂರು (Bengaluru): ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿ (College Student) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿಗಳಾದ ವಿಶ್ವನಾಥ್ ಮತ್ತು ಭವ್ಯ ದಂಪತಿಯ ಪುತ್ರ ಹರ್ಷ ಮೃತ ಯುವಕ. ಸೋಮವಾರ ಮನೆಯಲ್ಲಿ ದೇವರ ಪೂಜೆ ಮುಗಿಸಿದ ಬಳಿಕ, ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದನು.

ಇದನ್ನೂ ಓದಿ: ಎಣ್ಣೆಮತ್ತಲ್ಲಿ ಆಂಧ್ರ ಅಧಿಕಾರಿಯಿಂದ ಬೆಂಗಳೂರು ಪೊಲೀಸರ ಮೇಲೆ ದರ್ಪ! ಕೇಸ್ ದಾಖಲು

ಆದರೆ, ಕಾಲೇಜಿಗೆ ತೆರಳುವ ಬದಲು ಹರ್ಷ ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ಹೋಗಿದ್ದಾನೆ. ಅಲ್ಲಿ ಈಜಲು ನೀರಿಗೆ ಇಳಿದಾಗ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ಈಜು ಸರಿಯಾಗಿ ಬಾರದ ಕಾರಣ ನೀರಿನಿಂದ ಮೇಲೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆ ತಿಳಿದ ತಕ್ಷಣ ಸೋಲದೇವನಹಳ್ಳಿ ಪೊಲೀಸರು (Soladevanahalli Police) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೆರವಿನಿಂದ ಕೆರೆಯಲ್ಲಿ ಹುಡುಕಾಟ ನಡೆಸಿ ಹರ್ಷನ ಮೃತದೇಹವನ್ನು ಹೊರತೆಗೆಯಲಾಯಿತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories