ಬೆಂಗಳೂರು: ಹೊಟ್ಟೆಗೆ ಹೊಡೆದು, ತಲೆಯನ್ನು ಗುದ್ದಿಸಿ ತಾಯಿಯನ್ನೇ ಕೊಂದ ಮಗ

ಬೆಂಗಳೂರಿನ ಕಾಡುಗೋಡಿಯಲ್ಲಿ ಹಣಕಾಸು ಮತ್ತು ಕೌಟುಂಬಿಕ ವಿಚಾರಕ್ಕೆ ತಾಯಿಯನ್ನು ಹತ್ಯೆಗೈದ ಪುತ್ರ, ಸಾವನ್ನು ಸಹಜವೆಂದು ಬಿಂಬಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ. ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆ ರಹಸ್ಯ ಬಯಲಾಗಿದೆ.

ಬೆಂಗಳೂರಿನ (Bengaluru) ಕಾಡುಗೋಡಿ (Kadugodi) ಪ್ರದೇಶದಲ್ಲಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿ, ಆಕೆಯ ಸಾವು ಸಹಜವಾಗಿ ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ ಪುತ್ರನ ಕೃತ್ಯ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 45 ವರ್ಷದ ಬಾಲಾಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಮಂಗಲದ ಬೇವಿನಮರ ಕಾಲೋನಿಯಲ್ಲಿ ವಾಸವಿದ್ದ ಭಾಗ್ಯಮ್ಮ (59) ಅವರಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಬಾಲಾಜಿ ಗಾರೆ ಕೆಲಸ ಮಾಡಿಕೊಂಡಿದ್ದ. ತಾಯಿ ಮತ್ತು ಮಗನ ನಡುವೆ ಕುಡಿತ ಹಾಗೂ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 24ರಂದು ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಬಾಲಾಜಿ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ತಾಯಿ ಅಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆ ಎಂಬ ಅನುಮಾನ ಬಾರದಂತೆ ವರ್ತಿಸಿದ್ದ ಬಾಲಾಜಿ, ಸಂಬಂಧಿಕರು ಮತ್ತು ಸಹೋದರರಿಗೆ ಮಾಹಿತಿ ನೀಡಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ. ಆದರೆ, ಭಾಗ್ಯಮ್ಮ ಅವರ ಸಾವಿನ ಕುರಿತು ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಪೊಲೀಸರಿಗೆ ಅನುಮಾನ ಮೂಡಿಸಿತು. ಸೆಪ್ಟೆಂಬರ್ 25ರಂದು ಅಂತ್ಯಸಂಸ್ಕಾರದ ಸಿದ್ಧತೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ಆರಂಭದಲ್ಲಿ ಮೃತೆಯ ಮೊಮ್ಮಗಳು ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಆಧರಿಸಿ ಅಸ್ವಾಭಾವಿಕ ಸಾವು (Unnatural Death) ಪ್ರಕರಣ ದಾಖಲಿಸಲಾಗಿತ್ತು. ಆದರೆ, ಸಾವಿನ ಸುತ್ತ ಅನುಮಾನಗಳಿದ್ದ ಕಾರಣ ಮೃತದೇಹದ ಮರಣೋತ್ತರ ಪರೀಕ್ಷೆ (Post-mortem) ನಡೆಸುವಂತೆ ಕುಟುಂಬಸ್ಥರನ್ನು ಪೊಲೀಸರು ಮನವೊಲಿಸಿದರು.

ಇದನ್ನೂ ಓದಿ: ಬೆಂಗಳೂರು to ಸಾಗರಕ್ಕೆ ಹೊರಟ ಸ್ಲೀಪರ್ ಬಸ್‌ಗೆ ಬೆಂಕಿ: ತಪ್ಪಿದ ಭಾರೀ ಅವಘಡ

ಪರೀಕ್ಷೆಯ ವರದಿ ಪೊಲೀಸರ ಅನುಮಾನಕ್ಕೆ ಪುಷ್ಟಿ ನೀಡಿತು. ಭಾಗ್ಯಮ್ಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ದೇಹದ 12 ಕಡೆಗಳಲ್ಲಿ ಗಾಯಗಳಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ಸಾವಿನ ಕುರಿತು ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದರು. ಸೆಪ್ಟೆಂಬರ್ 24ರ ರಾತ್ರಿ ತಾಯಿ ಮತ್ತು ಮಗನ ನಡುವೆ ಜಗಳ ನಡೆದಿರುವ ಮಾಹಿತಿ ಲಭ್ಯವಾಯಿತು.

ಬಳಿಕ ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಾಯಿಯ ವರ್ತನೆ, ಮದ್ಯಪಾನ ಮತ್ತು ಹಣಕಾಸಿನ ವಿಚಾರಗಳಿಂದ ಮನಸ್ತಾಪ ಉಂಟಾಗಿತ್ತು ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.

ತನ್ನ ತಾಯಿ ಆಗಾಗ್ಗೆ ಮದ್ಯಪಾನ ಮಾಡಿ ಕಿರಿಕಿರಿ ಮಾಡುತ್ತಿದ್ದರು ಎಂಬುದು ಆರೋಪಿಯ ಒಂದು ಹೇಳಿಕೆ. ಮನೆಯ ಮುಂದೆ ವ್ಯಕ್ತಿಯೊಬ್ಬ ಆಗಾಗ್ಗೆ ಬಂದು ಕುಳಿತುಕೊಳ್ಳುತ್ತಿದ್ದ ವಿಚಾರವಾಗಿ ಜನರು ತಾಯಿ ಮತ್ತು ಆ ವ್ಯಕ್ತಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು ಎಂದೂ ಆತ ಹೇಳಿದ್ದಾನೆ.

ಜೊತೆಗೆ, ತಾಯಿಯಿಂದ ಪಡೆದಿದ್ದ 32 ಗ್ರಾಂ ಚಿನ್ನವನ್ನು (Gold Jewellery) ಅಡವಿಟ್ಟಿದ್ದೆ. ಅದನ್ನು ಬಿಡಿಸಿಕೊಳ್ಳುವಂತೆ ತಾಯಿ ಒತ್ತಾಯಿಸುತ್ತಿದ್ದರು. ಇದರಿಂದ ಕೋಪಗೊಂಡು ಹೊಟ್ಟೆಗೆ ಹೊಡೆದು, ತಲೆಯನ್ನು ಗುದ್ದಿಸಿ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories