ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ! ರಸ್ತೆಗಳು ಜಲಾವೃತ, ಸವಾರರಿಗೆ ಸಂಕಷ್ಟ
Bengaluru Rains: ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದ್ದಾರೆ.

- ನಗರದ ಹಲವೆಡೆ ಧಾರಾಕಾರ ಮಳೆ
- ಹಲವು ಪ್ರದೇಶಗಳಲ್ಲಿ ನೀರು
- ಮಳೆ ನೀರಿನಿಂದ ಸವಾರರಿಗೆ ಸಂಕಷ್ಟ
ಬೆಂಗಳೂರು (Bengaluru), ಅಕ್ಟೋಬರ್ 06: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ (Heavy Rain) ಹಲವು ಪ್ರದೇಶಗಳ ಜನರಿಗೆ ತೊಂದರೆ ತಂದಿದೆ. ಮಳೆ ನೀರು ರಸ್ತೆಗಳ ಮೇಲೆ ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರು ನಿಧಾನವಾಗಿ ಸಂಚರಿಸುವಂತಾಯಿತು.
ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಜೋರು ಮಳೆ ದಾಖಲಾಗಿದೆ. ಅದರಲ್ಲೂ ಕೆ.ಆರ್. ಮಾರ್ಕೆಟ್ (KR Market) ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.
ಇದನ್ನೂ ಓದಿ: ಬೆಂಗಳೂರು ಮಳೆ: ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು, ವಾಹನ ಸಂಚಾರ ಅಸ್ತವ್ಯಸ್ತ
ಇದೇ ವೇಳೆ ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ ಹಾಗೂ ಜಿಗಣಿ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದೆ. ಕೆಲವೆಡೆ ರಸ್ತೆ ಬದಿಗಳಲ್ಲಿ ನೀರು ನಿಂತಿದ್ದರಿಂದ ಪಾದಚಾರಿಗಳು ರಸ್ತೆ ದಾಟಲು ಪರದಾಡಿದರು.
ರಾತ್ರಿ ವೇಳೆ ಏಕಾಏಕಿ ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸಿದರು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



