ಯುವತಿಗೆ ಗುಪ್ತಾಂಗ ತೋರಿಸಿ ಅಸಭ್ಯ ಸನ್ನೆ ಮಾಡಿದ ಆರೋಪ! ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರಿನ ಹೆಬ್ಬಾಳ ರಿಂಗ್ ರಸ್ತೆ ಬಳಿ ಯುವತಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಘಟನೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಬೆಂಗಳೂರಿನ (Bengaluru News) ಹೆಬ್ಬಾಳ ರಿಂಗ್ ರಸ್ತೆ ಬಳಿ ಯುವತಿಗೆ ಗುಪ್ತಾಂಗ ತೋರಿಸಿ ಅಸಭ್ಯ ಸನ್ನೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಪಡಿಸಿದೆ. ಚಿಕ್ಕಮಗಳೂರಿನ 26 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ನೋಡಿದಾಗ, ಅರ್ಜಿದಾರ ಯುವಕ ಬಸ್‌ನಿಂದ ಇಳಿದ ಬಳಿಕ ಶೌಚಾಲಯ ಹುಡುಕಿದ್ದಾನೆ. ಅದು ಸಿಗದ ಹಿನ್ನೆಲೆಯಲ್ಲಿ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರೆ ಅಲ್ಲಿಗೆ ಬಂದಿದ್ದರು ಎಂಬುದು ಅರ್ಜಿದಾರರ ವಾದವಾಗಿತ್ತು.

ಜನವರಿ 24ರಂದು ಘಟನೆ

ದೂರುದಾರ ಯುವತಿ ನೀಡಿರುವ ಮಾಹಿತಿಯ ಪ್ರಕಾರ (Case Background), 2026ರ ಜನವರಿ 24ರಂದು ಮಧ್ಯಾಹ್ನ ಸುಮಾರು 3.40ಕ್ಕೆ ಹೆಬ್ಬಾಳ ರಿಂಗ್ ರಸ್ತೆ ಸಮೀಪ ಬಸ್‌ನಿಂದ ಇಳಿದು ಮನೆಗೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಗುಪ್ತಾಂಗ ತೋರಿಸಿ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ ಎಂದು ಆರೋಪಿಸಿದ್ದರು.

ಆತನನ್ನು ಹಿಡಿಯಲು ಯುವತಿ ಮುಂದಾದಾಗ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕೂಗಿಕೊಂಡಿದ್ದು, ಸ್ಥಳದಲ್ಲಿದ್ದ ಕೆಲವರು ಆತನನ್ನು ಹಿಡಿದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ವಕೀಲರ ವಾದವೇನು?

ವಿಚಾರಣೆ ವೇಳೆ (Court Hearing) ಯುವಕನ ಪರ ವಕೀಲರು, ತಮ್ಮ ಕಕ್ಷಿದಾರ ಧರ್ಮಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಆತ ಮೂತ್ರ ವಿಸರ್ಜನೆಗಾಗಿ ತೆರಳಿದ್ದನೇ ಹೊರತು, ದೂರುದಾರರು ಆರೋಪಿಸಿರುವ ರೀತಿಯ ಕೃತ್ಯ ಎಸಗಿಲ್ಲ ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ದೂರುದಾರರ ಪರ ವಕೀಲರು, ಯುವಕ ಕೇವಲ ಗುಪ್ತಾಂಗ ತೋರಿಸುವುದಷ್ಟೇ ಅಲ್ಲದೆ ಅಸಭ್ಯ ಸನ್ನೆಯನ್ನೂ ಮಾಡಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದ ಪೀಠ

ಪ್ರಕರಣದ ದಾಖಲೆಗಳು ಮತ್ತು ವಾದಗಳನ್ನು ಪರಿಗಣಿಸಿದ ಹೈಕೋರ್ಟ್, ಈ ಪ್ರಕರಣದಲ್ಲಿ ಮಹಿಳೆಯ ಘನತೆಗೆ ಚ್ಯುತಿ ಉಂಟುಮಾಡುವ ರೀತಿಯ ಘಟನೆ ನಡೆದಿದೆ ಎಂಬ ಅಂಶವು ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಆಧಾರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಪರಿಸ್ಥಿತಿಯಲ್ಲಿ ವಿಚಾರಣೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಬಹುದು ಎಂದು ಪೀಠ ಹೇಳಿದೆ. ಹೀಗಾಗಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75(2) ಅಡಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories