Bengaluru: ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಮುಗಿಯದ ವೈಟ್‌ಟಾಪಿಂಗ್; ಸಂಚಾರ ದಟ್ಟಣೆಗೆ ನಲುಗಿದ ನಗರ
ಮೆಜೆಸ್ಟಿಕ್ ಸುತ್ತಮುತ್ತ ನಡೆಯುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಪ್ರವೇಶ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚುತ್ತಿದ್ದು ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ

- ಮೆಜೆಸ್ಟಿಕ್ ವೈಟ್‌ಟಾಪಿಂಗ್ ಕಾಮಗಾರಿ ವಿಳಂಬದಿಂದ ಸಂಚಾರ ದಟ್ಟಣೆ
- ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರವೇ ಮೆಜೆಸ್ಟಿಕ್‌ನಲ್ಲಿ ಗೊಂದಲ
- ಪಿಕ್‌ಅಪ್–ಡ್ರಾಪ್‌ನಿಂದ ಮೆಜೆಸ್ಟಿಕ್ ಸುತ್ತಲೂ ಸಂಚಾರ ಅಸ್ತವ್ಯಸ್ತ
ಬೆಂಗಳೂರು (Bengaluru): ಬೆಂಗಳೂರು ನಗರದ ಹೃದಯಭಾಗವಾದ ಮೆಜೆಸ್ಟಿಕ್ ಪ್ರದೇಶವು ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆಯ ದೊಡ್ಡ ಕೇಂದ್ರವಾಗಿ ಪರಿಣಮಿಸಿದೆ. ಇಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳದೇ ಇರುವುದೇ ಜನರ ನಿತ್ಯದ ಪ್ರಯಾಣಕ್ಕೆ ದೊಡ್ಡ ಅಡ್ಡಿಯಾಗಿದೆ.
ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆ, ಟ್ಯಾಂಕ್‌ಬಂಡ್ ರಸ್ತೆ ಹಾಗೂ ಧನ್ವಂತರಿ ರಸ್ತೆ ಮೂಲಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಮೆಜೆಸ್ಟಿಕ್–ಗಾಂಧಿನಗರ ಭಾಗಕ್ಕೆ ಪ್ರವೇಶಿಸುತ್ತಿವೆ. ಬೆಳಿಗ್ಗೆ ಹಾಗೂ ಸಂಜೆ ಪೀಕ್ ಅವಧಿಯಲ್ಲಿ ಈ ಮಾರ್ಗಗಳು ಸಂಪೂರ್ಣವಾಗಿ ವಾಹನಗಳಿಂದ ತುಂಬಿ ಹೋಗುತ್ತವೆ.
ಏಕಮುಖ ಸಂಚಾರವೇ ದಟ್ಟಣೆಗೆ ಕಾರಣ
ಯಶವಂತಪುರ, ಯಲಹಂಕ, ಮಲ್ಲೇಶ್ವರ, ಶೇಷಾದ್ರಿಪುರ ಹಾಗೂ ರಾಜಾಜಿನಗರದಿಂದ ಬರುವ ಬಿಎಂಟಿಸಿ ಬಸ್‌ಗಳು ಪ್ಲಾಟ್‌ಫಾರಂ ರಸ್ತೆಯ ಮೂಲಕ ಕೆಂಪೇಗೌಡ ಬಸ್ ನಿಲ್ದಾಣ ತಲುಪುತ್ತವೆ. ಏಕಮುಖ ಸಂಚಾರ ವ್ಯವಸ್ಥೆಯ ಕಾರಣ ಕಿರಿದಾದ ರಸ್ತೆಗಳಲ್ಲಿ ಓಕಳಿಪುರದ ಮಿಲ್ ಜಂಕ್ಷನ್‌ನಿಂದ ರಾಜೀವ್ ಗಾಂಧಿ ವೃತ್ತದವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಮೂವರು ವಿದ್ಯಾರ್ಥಿಗಳು ಸಾವು
ಟ್ಯಾಂಕ್‌ಬಂಡ್ ರಸ್ತೆಯಲ್ಲಿ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಖಾಸಗಿ ಬಸ್‌ಗಳು ಪಿಕ್‌ಅಪ್ ಮತ್ತು ಲಗೇಜ್ ಲೋಡ್ ಕಾರ್ಯಕ್ಕಾಗಿ ನಿಲ್ಲುವುದರಿಂದ ಸಂಚಾರ ಮತ್ತಷ್ಟು ಅಸ್ತವ್ಯಸ್ತವಾಗುತ್ತಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿರ್ಬಂಧ ವಿಧಿಸಲಾಗುತ್ತಿದ್ದು, ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ವಾರಾಂತ್ಯದಲ್ಲಿ ಪ್ರಯಾಣಿಕರಿಗೆ ಸಂಕಷ್ಟ
ವಾರಾಂತ್ಯಗಳಲ್ಲಿ ರೈಲು ಹಾಗೂ ಬಸ್ ಮೂಲಕ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರು ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಮಧ್ಯದಲ್ಲೇ ವಾಹನದಿಂದ ಇಳಿದು ನಡೆದುಕೊಂಡು ನಿಲ್ದಾಣದತ್ತ ಸಾಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ, ಶೇಷಾದ್ರಿಪುರ ರಸ್ತೆ, ಕೆ.ಆರ್. ವೃತ್ತ, ಶಿವಾನಂದ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಸೇರಿ ಹಲವು ಪ್ರಮುಖ ಜಂಕ್ಷನ್‌ಗಳು ದಟ್ಟಣೆಯ ಪ್ರಭಾವಕ್ಕೆ ಒಳಗಾಗಿವೆ. ಇಲ್ಲಿ ಇರುವ ಸರ್ಕಾರಿ ಕಚೇರಿ ಸಿಬ್ಬಂದಿ ಹಾಗೂ ವ್ಯಾಪಾರಿಗಳು ದಿನನಿತ್ಯದ ಸಂಚಾರ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ.



