5 ಕೆಜಿ ಗ್ಯಾಸ್ ಸಿಲಿಂಡರ್ ಈಗ ಮಾರುಕಟ್ಟೆಯಲ್ಲಿ ಲಭ್ಯ! ಯಾವುದೇ ಪ್ರೂಫ್ ಅಗತ್ಯವಿಲ್ಲ
ಗ್ಯಾಸ್ ಕೊರತೆಯ ಹಿನ್ನೆಲೆದಲ್ಲಿ 5 ಕೆಜಿ ಗ್ಯಾಸ್ ಸಿಲಿಂಡರ್ ಪರಿಚಯಿಸಲಾಗಿದೆ. ಇಂಡೇನ್, ಭಾರತ ಗ್ಯಾಸ್, ಎಚ್‌ಪಿ ಕಂಪನಿಗಳು ಈ ಸಣ್ಣ ಸಿಲಿಂಡರ್ ಬಿಡುಗಡೆ ಮಾಡಿದ್ದು, ಯಾವುದೇ ವಿಳಾಸ ದಾಖಲೆ ಇಲ್ಲದೆ ಕೂಡ ಸುಲಭವಾಗಿ ಖರೀದಿಸಬಹುದು.

5kg Gas Cylinder: ಇದುವರೆಗೆ ಗೃಹ ಬಳಕೆಗೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಹಾಗೂ ಹೋಟೆಲ್, ರೆಸ್ಟೋರೆಂಟ್ ಮುಂತಾದ ವ್ಯಾಪಾರಗಳಿಗೆ 19 ಕೆಜಿ ಸಿಲಿಂಡರ್ ಮಾತ್ರ ಹೆಚ್ಚು ಬಳಸಲಾಗುತ್ತಿತ್ತು. ಆದರೆ ಈಗ ಗ್ರಾಹಕರ ಅಗತ್ಯವನ್ನು ಗಮನಿಸಿ ಹೊಸದಾಗಿ 5 ಕೆಜಿ ಗ್ಯಾಸ್ ಸಿಲಿಂಡರ್ ಮಾರುಕಟ್ಟೆಗೆ ಬಂದಿದೆ.
ಇತ್ತೀಚೆಗೆ ಕೆಲವೆಡೆ ಗ್ಯಾಸ್ ಸರಬರಾಜಿನಲ್ಲಿ ಉಂಟಾದ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರಮುಖ ಗ್ಯಾಸ್ ಕಂಪನಿಗಳು ಈ ಹೊಸ ಕ್ರಮಕ್ಕೆ ಮುಂದಾಗಿವೆ. ಇಂಡೇನ್, ಭಾರತ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಕಂಪನಿಗಳು ತಮ್ಮದೇ ಬ್ರ್ಯಾಂಡ್‌ನಲ್ಲಿ ಈ ಸಣ್ಣ ಸಿಲಿಂಡರ್ ಅನ್ನು ಪರಿಚಯಿಸಿವೆ. ಕಡಿಮೆ ಪ್ರಮಾಣದ ಗ್ಯಾಸ್ ಬೇಕಾದವರಿಗೆ ಇದು ಬಹಳ ಅನುಕೂಲಕರ ಆಯ್ಕೆಯಾಗಲಿದೆ.
ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರಿಗೆ ಉಪಯುಕ್ತ
ಬಾಡಿಗೆ ಮನೆಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವಲಸೆ ಕಾರ್ಮಿಕರಿಗೆ ಈ 5 ಕೆಜಿ ಸಿಲಿಂಡರ್ ವಿಶೇಷವಾಗಿ ಸಹಾಯಕವಾಗಲಿದೆ. ದೊಡ್ಡ ಸಿಲಿಂಡರ್ ತೆಗೆದುಕೊಳ್ಳಲು ಸಾಧ್ಯವಾಗದವರು ಅಥವಾ ಕಡಿಮೆ ಬಳಕೆ ಇರುವವರು ಇದನ್ನು ಸುಲಭವಾಗಿ ಬಳಸಬಹುದು.
ಈ ಸಿಲಿಂಡರ್ ಅನ್ನು ನಗರಗಳಲ್ಲಿಯೇ ಅಲ್ಲದೆ ವಿವಿಧ ಸ್ಥಳಗಳಲ್ಲಿ ಸುಲಭವಾಗಿ ಖರೀದಿಸಬಹುದು. ಪೆಟ್ರೋಲ್ ಬಂಕ್‌ಗಳು, ಕಿರಾಣಿ ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳು ಹಾಗೂ ಗ್ಯಾಸ್ ವಿತರಕರ ಬಳಿ ಲಭ್ಯವಾಗಲಿದೆ.
ವಿಳಾಸ ದಾಖಲೆ ಅಗತ್ಯವಿಲ್ಲ
ಸಾಮಾನ್ಯವಾಗಿ ಗ್ಯಾಸ್ ಸಂಪರ್ಕ ಪಡೆಯಲು ವಿಳಾಸ ದಾಖಲೆ, ಅರ್ಜಿ ಮತ್ತು ಹಲವಾರು ಪ್ರಕ್ರಿಯೆಗಳು ಅಗತ್ಯವಿರುತ್ತವೆ. ಆದರೆ 5 ಕೆಜಿ ಗ್ಯಾಸ್ ಸಿಲಿಂಡರ್ ಪಡೆಯಲು ಇಂತಹ ಯಾವುದೇ ಕಠಿಣ ನಿಯಮಗಳಿಲ್ಲ.
ಗ್ರಾಹಕರು ತಮ್ಮ ಗುರುತಿನ ಚೀಟಿ (ID Card) ತೋರಿಸಿದರೆ ಸಾಕು. ಸಮೀಪದ ಗ್ಯಾಸ್ ಏಜೆನ್ಸಿಗೆ ತೆರಳಿ ತಕ್ಷಣವೇ ಸಿಲಿಂಡರ್ ಪಡೆಯಬಹುದು. ಮುಂಗಡ ಬುಕ್ಕಿಂಗ್ ಅಗತ್ಯವಿಲ್ಲದಿರುವುದು ಇದರ ಮತ್ತೊಂದು ಪ್ರಮುಖ ಪ್ರಯೋಜನವಾಗಿದೆ.
ಎಲ್ಲೆಲ್ಲಿ ಸಿಗುತ್ತದೆ?
ಇಂಡಿಯನ್ ಆಯಿಲ್ ಕಂಪನಿ “ಛೋಟು” ಎಂಬ ಹೆಸರಿನಲ್ಲಿ 5 ಕೆಜಿ ಸಿಲಿಂಡರ್ ಬಿಡುಗಡೆ ಮಾಡಿದೆ. ಇದು ಪೆಟ್ರೋಲ್ ಬಂಕ್‌ಗಳು ಮತ್ತು ಅಂಗಡಿಗಳಲ್ಲಿ ಲಭ್ಯ. ಭಾರತ ಗ್ಯಾಸ್ ಮಿನಿ ಸಿಲಿಂಡರ್ ಅನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಯೂ ಇದೆ. ನಿಗದಿತ ಸಂಖ್ಯೆಗೆ ಕರೆ ಮಾಡಿದರೆ ಕೆಲವು ಗಂಟೆಗಳಲ್ಲೇ ಮನೆಗೆ ತಲುಪಿಸುವ ಸೇವೆಯೂ ದೊರೆಯುತ್ತದೆ.
ಎಚ್‌ಪಿ ಗ್ಯಾಸ್ ಕೂಡ 5 ಕೆಜಿ ಸಿಲಿಂಡರ್ ಪರಿಚಯಿಸಿದ್ದು, ಪೆಟ್ರೋಲ್ ಬಂಕ್ ಮತ್ತು ವಿವಿಧ ಮಾರಾಟ ಕೇಂದ್ರಗಳಲ್ಲಿ ಪಡೆಯಬಹುದು. ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ ಸಣ್ಣ ಸಿಲಿಂಡರ್ ಈಗ ಅನೇಕ ಕುಟುಂಬಗಳಿಗೆ ಸಹಾಯಕವಾಗುವ ಸಾಧ್ಯತೆ ಇದೆ.



