ಮೊಬೈಲ್ ಕಿತ್ತು ನೆಲಕ್ಕೆ ಎಸೆದ ತಂದೆ; ಕುಕ್ಕರ್ ಮುಚ್ಚಳದಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದ ಮಗಳು
ಮನೆಗೆಲಸದ ವಿಚಾರವಾಗಿ ತಂದೆ ಮತ್ತು ಮಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮೊಬೈಲ್ ಒಡೆದಿದ್ದಕ್ಕೆ ಆಕ್ರೋಶಗೊಂಡ 22 ವರ್ಷದ ಯುವತಿ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಗುಜರಾತ್: ಮನೆಯಲ್ಲಿ ನಡೆದ ಸಣ್ಣ ವಿಚಾರವೊಂದು ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಮನೆಗೆಲಸ ಮಾಡುವಂತೆ ತಂದೆ ಮಗಳಿಗೆ ಬುದ್ಧಿವಾದ ಹೇಳಿದ್ದು, ಈ ಸಂದರ್ಭದಲ್ಲಿ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಮಗಳು ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸೂರತ್‌ನ ಅಮ್ರೋಲಿ ಪ್ರದೇಶದಲ್ಲಿ ನಡೆದಿದೆ.
ಅಕ್ಟೋಬರ್ 31ರ ರಾತ್ರಿ ಸುಮಾರು 10.30ರ ವೇಳೆಗೆ ರಮೇಶ್‌ಸಿಂಗ್ ಕೈಲಾಶ್‌ಸಿಂಗ್ ರಜಪೂತ್ ಅವರು ಪತ್ನಿ ಮಂಜುಬೆನ್ ಮತ್ತು ಕಿರಿಯ ಮಗಳು ಕಾಜಲ್ ಜೊತೆ ಮನೆಯ ವಿಚಾರವಾಗಿ ಮಾತನಾಡುತ್ತಿದ್ದರು. ಮನೆಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ 22 ವರ್ಷದ ಕಾಜಲ್‌ಳನ್ನು ತಂದೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಒಂದೇ ಮನೆಯಲ್ಲಿ 30 ನಾಗರಹಾವು ಪತ್ತೆ! ಅಗೆದು ನೋಡಿದ್ರೆ ನೂರಕ್ಕೂ ಹೆಚ್ಚು ಮೊಟ್ಟೆಗಳು
ವಾದದ ನಡುವೆ ರಮೇಶ್‌ಸಿಂಗ್ ಮಗಳ ಕೈಯಲ್ಲಿದ್ದ ಮೊಬೈಲ್ ಫೋನ್ (Mobile Phone) ಕಸಿದುಕೊಂಡು ನೆಲಕ್ಕೆ ಎಸೆದು ಒಡೆದಿದ್ದಾರೆ. ಇದರಿಂದ ತೀವ್ರವಾಗಿ ಕೋಪಗೊಂಡ ಕಾಜಲ್, ಅಡುಗೆಮನೆಯಲ್ಲಿದ್ದ ಪ್ರೆಶರ್ ಕುಕ್ಕರ್‌ನ ಮುಚ್ಚಳವನ್ನು ತೆಗೆದುಕೊಂಡು ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಆಕೆ, ಬಳಿಕ ಚಾಕುವಿನಿಂದ ತಂದೆಯ ಹೊಟ್ಟೆಗೆ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಮೇಶ್‌ಸಿಂಗ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಕುಟುಂಬದವರು ತುರ್ತು ಆಂಬುಲೆನ್ಸ್ ಸೇವೆ (Emergency Ambulance) ಗೆ ಕರೆ ಮಾಡಿ ನೆರವು ಕೋರಿದ್ದಾರೆ.
ಇದನ್ನೂ ಓದಿ: Video: ಕ್ಲಿನಿಕ್‌ನಲ್ಲಿ ರೋಗಿಯ ಕೈಯಲ್ಲಿದ್ದ ಮೊಬೈಲ್ ಏಕಾಏಕಿ ಸ್ಫೋಟ! ವೈರಲ್ ದೃಶ್ಯ
ಮಾಹಿತಿ ಪಡೆದ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಮೇಶ್‌ಸಿಂಗ್ ಅವರನ್ನು ಪರೀಕ್ಷಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇತ್ತ ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಮಂಜುಬೆನ್ ಅಮ್ರೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಕಾಜಲ್ ವಿರುದ್ಧ ಕೊಲೆ ಪ್ರಕರಣ (Murder Case) ದಾಖಲಿಸಿ ಬಂಧಿಸಿದ್ದಾರೆ. ಬಳಿಕ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






