ಡಿಜಿಟಲ್ ಪೇಮೆಂಟ್‌ಗಳು ಸಿಬಿಲ್ ಸ್ಕೋರ್‌ಗೆ ಎಫೆಕ್ಟ್ ಆಗುತ್ತಾ? ಮಹತ್ವದ ಮಾಹಿತಿ
UPI ಮತ್ತು ಡಿಜಿಟಲ್ ಪೇಮೆಂಟ್‌ಗಳನ್ನು ಹೆಚ್ಚು ಬಳಸುವವರು ಈ ಮಾಹಿತಿ ತಿಳಿದಿರಬೇಕು. ಇವು ನೇರವಾಗಿ CIBIL ಸ್ಕೋರ್‌ಗೆ ಪರಿಣಾಮ ಬೀರುವುದಿಲ್ಲ, ಆದರೆ ನಿಮ್ಮ ಬ್ಯಾಂಕ್ ವ್ಯವಹಾರಗಳ ಇತಿಹಾಸ ಸಾಲದಾತರ ನಿರ್ಧಾರವನ್ನು ಪ್ರಭಾವಿಸಬಹುದು.

Digital Payments: ಭಾರತದಲ್ಲಿ ಡಿಜಿಟಲ್ ವ್ಯವಹಾರಗಳು ವೇಗವಾಗಿ ಹೆಚ್ಚುತ್ತಿವೆ. ಇಂದಿನ ದಿನಗಳಲ್ಲಿ ಚಿಲ್ಲರೆ ಅಂಗಡಿ, ಹೋಟೆಲ್, ಆಟೋ ರಿಕ್ಷಾ ಚಾಲಕರವರೆಗೂ ಬಹುತೇಕ ಎಲ್ಲರೂ UPI ಮೂಲಕ ಪಾವತಿ ಸ್ವೀಕರಿಸುತ್ತಿದ್ದಾರೆ. ಹಲವರು ಈಗ ನಗದು ಅಥವಾ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವನ್ನೇ ಕಡಿಮೆ ಮಾಡಿಕೊಂಡಿದ್ದಾರೆ.
ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಕೆಲವೇ ಸೆಕೆಂಡ್‌ಗಳಲ್ಲಿ ಹಣ ವರ್ಗಾವಣೆ ಮಾಡಬಹುದು. ಆದರೆ ಹಲವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರುತ್ತದೆ, ನಾವು ಮಾಡುವ ಈ Digital Payments ನಮ್ಮ CIBIL Score ಮೇಲೆ ಪರಿಣಾಮ ಬೀರುತ್ತವೆಯೇ?
CIBIL ಸ್ಕೋರ್ ಮೇಲೆ ನೇರ ಪರಿಣಾಮವಿಲ್ಲ
ಹಣಕಾಸು ತಜ್ಞರ ಪ್ರಕಾರ, UPI ಅಥವಾ ಡಿಜಿಟಲ್ ಪೇಮೆಂಟ್‌ಗಳು ನೇರವಾಗಿ CIBIL ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಎಷ್ಟು ಬಾರಿ ಡಿಜಿಟಲ್ ಮೂಲಕ ಪಾವತಿ ಮಾಡಿದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದಿಲ್ಲ ಅಥವಾ ಕಡಿಮೆ ಮಾಡುವುದಿಲ್ಲ.
ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ ನೀವು ತೆಗೆದುಕೊಂಡಿರುವ ಸಾಲಗಳು, ಕ್ರೆಡಿಟ್ ಕಾರ್ಡ್ ಬಾಕಿಗಳು ಮತ್ತು ಅವುಗಳನ್ನು ಸಮಯಕ್ಕೆ ಸರಿಯಾಗಿ ತೀರಿಸಿರುವುದರ ಆಧಾರದಲ್ಲಿ ನಿರ್ಧಾರವಾಗುತ್ತದೆ.
ಬ್ಯಾಂಕ್ ವ್ಯವಹಾರಗಳ ಇತಿಹಾಸ ಗಮನಿಸುವ ಸಾಲದಾತರು
ಆದರೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಾಲದಾತರು ಕೇವಲ ಕ್ರೆಡಿಟ್ ಸ್ಕೋರ್ ನೋಡದೇ, ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಕೂಡ ಪರಿಶೀಲಿಸುತ್ತಾರೆ. ನಿಮ್ಮ ಆದಾಯ ಹೇಗೆ ಬರುತ್ತದೆ, ಹಣವನ್ನು ಹೇಗೆ ಖರ್ಚು ಮಾಡುತ್ತೀರಿ, ನಿಯಮಿತ ವ್ಯವಹಾರಗಳಿವೆಯೇ ಎಂಬುದನ್ನು ಅವುಗಳಿಂದ ಅಂದಾಜು ಮಾಡುತ್ತಾರೆ.
ಇಲ್ಲಿ ನಿಮ್ಮ Digital Payments ಇತಿಹಾಸವು ಪ್ರಮುಖವಾಗುತ್ತದೆ. ಅದು ನೇರವಾಗಿ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲದಿದ್ದರೂ, ಸಾಲದಾತರಿಗೆ ನಿಮ್ಮ ಹಣಕಾಸು ಶಿಸ್ತಿನ ಬಗ್ಗೆ ಒಂದು ಚಿತ್ರಣ ನೀಡುತ್ತದೆ.
ಖಾತೆಯಲ್ಲಿ ಆಗಾಗ ಜೀರೋ ಬ್ಯಾಲೆನ್ಸ್ ಇದ್ದರೆ ಎಚ್ಚರಿಕೆ
ಕೆಲವರು ಸಂಬಳ ಬಂದ ಕೂಡಲೇ ಸಂಪೂರ್ಣ ಹಣ ಖರ್ಚು ಮಾಡುವ ಪ್ರವೃತ್ತಿ ಹೊಂದಿರುತ್ತಾರೆ. ಪರಿಣಾಮವಾಗಿ ಖಾತೆಯಲ್ಲಿ ಹಲವಾರು ಬಾರಿ Zero Balance ಕಾಣಬಹುದು. ಈ ರೀತಿಯ ಮಾದರಿಯನ್ನು ಸಾಲದಾತರು ಗಮನಿಸುತ್ತಾರೆ.
ಇದು ನಿಮ್ಮ CIBIL Score ಅನ್ನು ನೇರವಾಗಿ ಕಡಿಮೆ ಮಾಡದೇ ಇದ್ದರೂ, ಸಾಲ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಅವರ ನಿರ್ಧಾರವನ್ನು ಪ್ರಭಾವಿಸಬಹುದು.
ಹಣಕಾಸು ಶಿಸ್ತೇ ಮುಖ್ಯ
ಹೀಗಾಗಿ ಡಿಜಿಟಲ್ ಪಾವತಿಗಳನ್ನು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮತೋಲನವನ್ನು ಕಾಪಾಡುವುದು ಮತ್ತು ಖರ್ಚು-ಆದಾಯವನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ.
ನಿಯಮಿತ ಉಳಿತಾಯ, ಸರಿಯಾದ ಹಣಕಾಸು ದಾಖಲೆಗಳು ಮತ್ತು ಶಿಸ್ತಿನ ವ್ಯವಹಾರಗಳು ಇದ್ದರೆ ಭವಿಷ್ಯದಲ್ಲಿ ಸಾಲ ಪಡೆಯುವಾಗ ನಿಮಗೆ ಅನುಕೂಲವಾಗಬಹುದು.



