ದುಬೈನಲ್ಲಿ ಚಿನ್ನದ ಬೆಲೆ ಎಷ್ಟಿದೆ? ನೀವು ನಂಬೋಲ್ಲ, ಭಾರತಕ್ಕಿಂತ ಎಷ್ಟು ಕಡಿಮೆ ಗೊತ್ತ

ದುಬೈನಲ್ಲಿ ಚಿನ್ನದ ಬೆಲೆ ಭಾರತಕ್ಕಿಂತ ಕಡಿಮೆ ಎನ್ನುವುದು ಬಹುತೇಕ ಭಾರತೀಯರಿಗೆ ತಿಳಿದಿರುವ ವಿಷಯ. ಆದರೆ ನಿಜವಾದ ದರ, ತೆರಿಗೆ ವ್ಯತ್ಯಾಸ ಮತ್ತು ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎಂಬ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ.

ದುಬೈನಲ್ಲಿ ಚಿನ್ನ ಏಕೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ?

Dubai Gold Price vs India: ಜಾಗತಿಕ ರಾಜಕೀಯ ಉದ್ವಿಗ್ನತೆ, ಯುದ್ಧ ಭೀತಿ ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ಹೂಡಿಕೆದಾರರು ಸುರಕ್ಷಿತ ಆಸ್ತಿಯೆಂದು ಪರಿಗಣಿಸುವ ಚಿನ್ನದತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೂ ಭಾರತೀಯ ಮಾರುಕಟ್ಟೆಯೊಂದಿಗೆ ಹೋಲಿಸಿದರೆ ದುಬೈನಲ್ಲಿ ಚಿನ್ನ ಇನ್ನೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದು ಗಮನಾರ್ಹ.

ಭಾರತದಲ್ಲಿ ಚಿನ್ನದ ಮೇಲೆ ಇಂಪೋರ್ಟ್ ಡ್ಯೂಟಿ ಹಾಗೂ ಇತರ ತೆರಿಗೆಗಳು ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ ದುಬೈನಲ್ಲಿ ಇಂತಹ ತೆರಿಗೆಗಳು ಕಡಿಮೆ ಇರುವುದರಿಂದ ಚಿನ್ನದ ಬೆಲೆ ಸಹಜವಾಗಿಯೇ ಕಡಿಮೆ ಮಟ್ಟದಲ್ಲಿರುತ್ತದೆ.

ತೆರಿಗೆ ನೀತಿಗಳು ಬೆಲೆ ಮೇಲೆ ಪ್ರಭಾವ

ದುಬೈನಲ್ಲಿ ಚಿನ್ನದ ಆಮದು ಮೇಲೆ ಯಾವುದೇ ದೊಡ್ಡ ಇಂಪೋರ್ಟ್ ಡ್ಯೂಟಿ ವಿಧಿಸಲಾಗುವುದಿಲ್ಲ. ಖರೀದಿಸುವಾಗ ಕೇವಲ ಸ್ವಲ್ಪ ಪ್ರಮಾಣದ VAT ಮಾತ್ರ ವಿಧಿಸಲಾಗುತ್ತದೆ. ಇದರಿಂದ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗುವುದಿಲ್ಲ.

ಇದಕ್ಕೆ ಜೊತೆಗೆ ಯುಎಇ ಕರೆನ್ಸಿಯಾದ ದಿರ್ಹಾಮ್ (AED) ಅಮೆರಿಕನ್ ಡಾಲರ್‌ಗೆ ಲಿಂಕ್ ಆಗಿರುವುದರಿಂದ ಅಲ್ಲಿ ಬೆಲೆ ಸ್ಥಿರವಾಗಿರಲು ಸಹಕಾರಿಯಾಗಿದೆ. ವಿಶ್ವಮಟ್ಟದ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವುದರಿಂದ ದುಬೈ ಚಿನ್ನದ ಮೇಲೆ ಭಾರತೀಯರಿಗೆ ಹೆಚ್ಚಿನ ವಿಶ್ವಾಸವೂ ಇದೆ.

ದುಬೈ ಚಿನ್ನದ ಬೆಲೆ (8 ಏಪ್ರಿಲ್ 2026 – ಅಂದಾಜು)

ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ ದುಬೈನಲ್ಲಿ 10 ಗ್ರಾಂ ಚಿನ್ನದ ಅಂದಾಜು ಬೆಲೆ ಈ ರೀತಿ ಇದೆ:

24 ಕ್ಯಾರಟ್ ಚಿನ್ನ: AED 6,100 – 6,200 (ಸುಮಾರು ₹1,37,000 – ₹1,43,000)
22 ಕ್ಯಾರಟ್ ಚಿನ್ನ: AED 5,650 – 5,700 (ಸುಮಾರು ₹1,27,000 – ₹1,32,000)

ಇದಕ್ಕೆ ಹೋಲಿಸಿದರೆ ಭಾರತದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಸುಮಾರು ₹1,53,820 ಇದ್ದು, 22 ಕ್ಯಾರಟ್ ಚಿನ್ನ ಸುಮಾರು ₹1,41,000 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ.

ಭಾರತಕ್ಕೆ ದುಬೈಯಿಂದ ಎಷ್ಟು ಚಿನ್ನ ತರಬಹುದು?

ವಿದೇಶದಲ್ಲಿ ಕನಿಷ್ಠ ಒಂದು ವರ್ಷ ವಾಸಿಸಿರುವ ಭಾರತೀಯರು ಭಾರತಕ್ಕೆ ಮರಳುವಾಗ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಕಸ್ಟಮ್ಸ್ ಶುಲ್ಕವಿಲ್ಲದೆ ತರಬಹುದು.

ಮಹಿಳೆಗಳು: ಗರಿಷ್ಠ 40 ಗ್ರಾಂ ಚಿನ್ನ
ಪುರುಷರು: ಗರಿಷ್ಠ 20 ಗ್ರಾಂ ಚಿನ್ನ

ಇದರಿಗಿಂತ ಹೆಚ್ಚು ಚಿನ್ನ ತಂದರೆ ಅದಕ್ಕೆ ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕಾಗುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಈ ವಿನಾಯಿತಿ ಕೇವಲ ಆಭರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಚಿನ್ನದ ನಾಣ್ಯಗಳು ಅಥವಾ ಬಿಸ್ಕತ್ತುಗಳ ಮೇಲೆ ಮೊದಲ ಗ್ರಾಮಿನಿಂದಲೇ ತೆರಿಗೆ ವಿಧಿಸಲಾಗುತ್ತದೆ.

ಖರೀದಿಸುವ ಮೊದಲು ಗಮನಿಸಬೇಕಾದುದು

ದುಬೈನಲ್ಲಿ ಚಿನ್ನದ ಮೂಲ ಬೆಲೆ ಕಡಿಮೆ ಇದ್ದರೂ ಜ್ಯುವೆಲ್ಲರಿ ಖರೀದಿಸುವಾಗ ಮೇಕಿಂಗ್ ಚಾರ್ಜ್ ಹೆಚ್ಚುವರಿ ಆಗಿರಬಹುದು. ಸಾಮಾನ್ಯವಾಗಿ ಇದು ಸುಮಾರು 5% ರಿಂದ 25% ವರೆಗೆ ಇರಬಹುದು.

ಜೊತೆಗೆ ಜಾಗತಿಕ ಮಾರುಕಟ್ಟೆಯ ಬದಲಾವಣೆಗಳಿಂದ ಚಿನ್ನದ ಬೆಲೆ ಗಂಟೆಗೊಂದು ಬಾರಿ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿ ಮಾಡುವ ಮುನ್ನ ತಾಜಾ ದರ ಪರಿಶೀಲಿಸುವುದು ಉತ್ತಮ.

Related Stories