Gold Rate: ಚಿನ್ನದ ಬೆಲೆ ಕೆಲವೇ ಗಂಟೆಗಳಲ್ಲಿ 2,450 ರೂಪಾಯಿ ಹೆಚ್ಚಳ! ಬೆಳ್ಳಿ 4 ಲಕ್ಷದತ್ತ ದೌಡು
Gold Rate Today: ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿದ್ದು, ದಿನದಿಂದ ದಿನಕ್ಕೆ ಹೊಸ ಗರಿಷ್ಠಗಳನ್ನು ತಲುಪುತ್ತಿವೆ. ಈ ಮೂಲಕ ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ.
- ಚಿನ್ನದ ಬೆಲೆ ದಾಖಲೆ ಮಟ್ಟ
- ಬೆಳ್ಳಿ ಬೆಲೆ 4 ಲಕ್ಷದತ್ತ ದೌಡು
- ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ
Gold Rate Today: ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಗ್ರಾಹಕರಿಗೆ ಭಾರೀ ಶಾಕ್ ನೀಡಿವೆ. ದಿನವೂ ಬೆಳಿಗ್ಗೆ ನವೀಕರಣವಾಗುವ ದರಗಳು, ಈ ಬಾರಿ ಒಂದೇ ದಿನದಲ್ಲಿ ಸಾವಿರಾರು ರೂಪಾಯಿಗಳ ಏರಿಕೆ ದಾಖಲಿಸಿ ಆತಂಕ ಹುಟ್ಟಿಸಿವೆ.
ಸೋಮವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಏಕಾಏಕಿ ಸುಮಾರು 2,450 ರೂಪಾಯಿ ಹೆಚ್ಚಳ ಕಂಡಿದೆ. 22 ಕ್ಯಾರೆಟ್ ಚಿನ್ನವೂ 2,250 ರೂಪಾಯಿಗಳಷ್ಟು ಜಿಗಿತ ಕಂಡಿದೆ. ಇದೇ ವೇಳೆ ಕಿಲೋ ಬೆಳ್ಳಿಯ ಬೆಲೆ ಸುಮಾರು 5,000 ರೂಪಾಯಿ ಏರಿಕೆಯಾಗಿದೆ. ಬೆಳಿಗ್ಗೆ ಸ್ವಲ್ಪ ಇಳಿಕೆಯ ಸೂಚನೆ ನೀಡಿದ್ದ ದರಗಳು, ಕೆಲವೇ ಗಂಟೆಗಳಲ್ಲಿ ಹೊಸ ಗರಿಷ್ಠಕ್ಕೆ ತಲುಪಿವೆ.
ಈಗ ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 1,62,710 ರೂಪಾಯಿಗೆ ತಲುಪಿದ್ದು, 22 ಕ್ಯಾರೆಟ್ ಚಿನ್ನ 1,49,150 ರೂಪಾಯಿಗಳ ಬಳಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಕಿಲೋಗೆ 3,75,000 ರೂಪಾಯಿಯ ಸಮೀಪ ಟ್ರೇಡ್ ಆಗುತ್ತಿದ್ದು, ಇನ್ನೂ ಕೆಲ ದಿನಗಳಲ್ಲಿ 4 ಲಕ್ಷ ರೂಪಾಯಿ ಗಡಿ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚಿನ್ನದ ಬೆಲೆ ಮೇಲೆ ಜಾಗತಿಕ ಬೆಳವಣಿಗೆಗಳ ಪರಿಣಾಮ
ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆ ಹೆಚ್ಚುತ್ತಿರುವುದು ಚಿನ್ನದ ಬೆಲೆಗಳಿಗೆ ಬಲ ನೀಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ 5,000 ಡಾಲರ್ ಗಡಿ ದಾಟಿದ್ದು, ಬುಲ್ಲಿಯನ್ ಅನ್ನು ಸುರಕ್ಷಿತ ಹೂಡಿಕೆ ಎಂಬ ಭಾವನೆ ಮತ್ತಷ್ಟು ಬಲಪಡಿಸಿದೆ. ಕಳೆದ ಎರಡು ವರ್ಷಗಳಲ್ಲಿ ಚಿನ್ನದ ದರ ದ್ವಿಗುಣಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಚಿನ್ನದ ಜೊತೆ ಬೆಳ್ಳಿ ಏರಿಕೆಯ ಹಿಂದೆ ಆತಂಕದ ಸೂಚನೆ?
ಇತಿಹಾಸವನ್ನು ನೋಡಿದರೆ, ಆರ್ಥಿಕ ವ್ಯವಸ್ಥೆಯಲ್ಲಿ ಅಶಾಂತಿ ಉಂಟಾದಾಗಲೆಲ್ಲ ಬೆಳ್ಳಿ ವೇಗವಾಗಿ ಏರುತ್ತದೆ. ಈಗ ಬೆಳ್ಳಿ ಔನ್ಸ್ಗೆ ಸುಮಾರು 108 ಡಾಲರ್ ಮಟ್ಟ ತಲುಪಿದ್ದು, ಹೂಡಿಕೆದಾರರಲ್ಲಿ ಒಂದೆಡೆ ಲಾಭದ ಖುಷಿ ಇದ್ದರೆ, ಮತ್ತೊಂದೆಡೆ ಭಾರೀ ಪತನದ ಭಯವೂ ಕಾಡುತ್ತಿದೆ.
ಅಪಾಯ ವಲಯ ಯಾವುದು?
ಮಾರುಕಟ್ಟೆ ತಜ್ಞರ ಪ್ರಕಾರ, ಬೆಳ್ಳಿ ಬೆಲೆ 125 ರಿಂದ 130 ಡಾಲರ್ ನಡುವಿನ ಹಂತ ತಲುಪಿದರೆ ಅಪಾಯದ ಘಂಟೆ ಮೊಳಗುವ ಸಾಧ್ಯತೆ ಇದೆ. ಇತಿಹಾಸದಲ್ಲಿ ಪ್ರತೀ ದೊಡ್ಡ ಏರಿಕೆಯ ನಂತರ ತೀವ್ರ ಕುಸಿತ ಕಂಡಿರುವುದರಿಂದ, ಹೂಡಿಕೆದಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ವಿಶ್ಲೇಷಕರು ಸಲಹೆ ನೀಡುತ್ತಿದ್ದಾರೆ.
ಚಿನ್ನದ ಬೆಲೆ ಈ ವಾರವೂ ಏರಿಕೆಯ ಹಾದಿಯಲ್ಲೇ ಓಟ! ಬೆಂಗಳೂರು ಚಿನ್ನದ ದರ ದಾಖಲೆ ಮಟ್ಟ



