ICICI Credit Card: ಐಸಿಐಸಿಐ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಶಾಕ್! ಫೆ.1ರಿಂದ ನಿಯಮಗಳಲ್ಲಿ ಬದಲಾವಣೆ
ICICI Bank Credit Card: ಫೆಬ್ರವರಿ 1ರಿಂದ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಜಾರಿಯಾಗಲಿದ್ದು BookMyShow ಉಚಿತ ಟಿಕೆಟ್ ರದ್ದು ರಿವಾರ್ಡ್ ಪಾಯಿಂಟ್ ವ್ಯವಸ್ಥೆ ಪರಿಷ್ಕರಣೆ ಮತ್ತು ಹೊಸ ಶುಲ್ಕಗಳು ಗ್ರಾಹಕರಿಗೆ ಅನ್ವಯವಾಗಲಿವೆ

- ಐಸಿಐಸಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
- ಬುಕ್ಮೈಶೋ ಉಚಿತ ಟಿಕೆಟ್ ಸೌಲಭ್ಯ ರದ್ದು
- ರಿವಾರ್ಡ್ ಪಾಯಿಂಟ್ ಮತ್ತು ಶುಲ್ಕಗಳ ಹೊಸ ನಿಯಮ
ICICI Bank Credit Card: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಮತ್ತೊಂದು ಬದಲಾವಣೆಯ ಸುದ್ದಿ ಬಂದಿದೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ICICI Bank ತನ್ನ ಕ್ರೆಡಿಟ್ ಕಾರ್ಡ್ ಸೇವೆಗಳ ನಿಯಮಗಳನ್ನು ಪರಿಷ್ಕರಿಸಿದ್ದು, ಫೆಬ್ರವರಿ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಕುರಿತು ಗ್ರಾಹಕರಿಗೆ ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಈ ಬದಲಾವಣೆಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಬುಕ್ಮೈಶೋ ಮೂಲಕ ನೀಡಲಾಗುತ್ತಿದ್ದ ಉಚಿತ ಸಿನಿಮಾ ಟಿಕೆಟ್ ಸೌಲಭ್ಯ. ಐಸಿಐಸಿಐ ಇನ್ಸ್ಟಂಟ್ ಪ್ಲಾಟಿನಂ ಚಿಪ್ ಮತ್ತು ಇನ್ಸ್ಟಂಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ಗಳಿಗೆ ಈವರೆಗೆ ದೊರಕುತ್ತಿದ್ದ ಕಮ್ಪ್ಲಿಮೆಂಟರಿ ಟಿಕೆಟ್ಗಳನ್ನು ಫೆ.1ರಿಂದ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರಿವಾರ್ಡ್ ಪಾಯಿಂಟ್ಗಳು
ಬದಲಾವಣೆಗಳ ನಡುವೆಯೂ ಕೆಲವು ಸೌಲಭ್ಯಗಳು ಮುಂದುವರಿಯುತ್ತವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವಿಮೆ ಹಾಗೂ ಸಾರಿಗೆ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್ಗಳು ಮುಂದುವರಿಯಲಿವೆ. ಸಿನಿಮಾ, ಟ್ರಾನ್ಸ್ಪೋರ್ಟ್ ಹಾಗೂ ಇನ್ಸೂರೆನ್ಸ್ ಪೇಮೆಂಟ್ಗಳಿಗೆ ನೀಡುತ್ತಿದ್ದ ಪಾಯಿಂಟ್ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ಥಗಿತ ಇಲ್ಲ ಎಂದು ಐಸಿಐಸಿಐ ತಿಳಿಸಿದೆ.
ಇದೇ ವೇಳೆ ಐಸಿಐಸಿಐ ಸೂಪರ್ ಸೇವರ್ HPCL ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೆಚ್ಚುವರಿ ಲಾಭ ಸಿಗಲಿದೆ. ವಿಮಾ ಪಾವತಿಗಳ ಮೇಲೆ ₹40,000 ವರೆಗೆ ರಿವಾರ್ಡ್ ಪಾಯಿಂಟ್ ದೊರೆಯಲಿದೆ ಎಂದು ಬ್ಯಾಂಕ್ ಹೇಳಿದೆ. HPCL ಸೂಪರ್ ಸೇವರ್ ಕಾರ್ಡ್ಗಳಿಂದ ಸಾರಿಗೆ ಪಾವತಿಗಳಿಗೆ ₹10,000 ರಿಂದ ₹40,000 ವರೆಗೆ ಪಾಯಿಂಟ್ ಸಿಗುವ ಸಾಧ್ಯತೆ ಇದೆ.
ಹೊಸ ಶುಲ್ಕಗಳು, ಹೆಚ್ಚಿದ ಚಾರ್ಜ್
ಜನವರಿ 15ರಿಂದಲೇ ಕೆಲವು ರಿಟೇಲ್ ಕ್ರೆಡಿಟ್ ಕಾರ್ಡ್ ಚಾರ್ಜ್ಗಳನ್ನು ಐಸಿಐಸಿಐ ಪರಿಷ್ಕರಿಸಿದೆ. ಆನ್ಲೈನ್ ಗೇಮಿಂಗ್, ರಮ್ಮಿ, ಡ್ರೀಮ್ 11, MPL, ಜಂಗ್ಲೀ ಗೇಮ್ಸ್ ಮೊದಲಾದ ಪ್ಲಾಟ್ಫಾರ್ಮ್ಗಳಲ್ಲಿ ಮಾಡುವ ವಹಿವಾಟುಗಳಿಗೆ 2 ಶೇಕಡಾ ಶುಲ್ಕ ವಿಧಿಸಲಾಗುತ್ತದೆ. ಇನ್ನು ತೃತೀಯ ಪಕ್ಷ ವಾಲೆಟ್ಗಳಿಗೆ ₹5,000ಕ್ಕಿಂತ ಹೆಚ್ಚಿನ ಲೋಡಿಂಗ್ ಮಾಡಿದರೆ 1 ಶೇಕಡಾ ಫೀಸ್ ವಸೂಲಿ ಮಾಡಲಾಗುತ್ತದೆ.
ಈ ಎಲ್ಲ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡಿದೆ.



