PAN Card: ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ, ಬಳಕೆದಾರರಿಗೆ ಬಿಗ್ ರಿಲೀಫ್!
ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ಡ್ರಾಫ್ಟ್ ಇನ್‌ಕಮ್ ಟ್ಯಾಕ್ಸ್ ರೂಲ್ಸ್ 2026 ಮೂಲಕ ಪ್ಯಾನ್ ಕಾರ್ಡ್ ಬಳಕೆ ಸಂಬಂಧ ಹಲವು ಮಿತಿಗಳನ್ನು ಹೆಚ್ಚಿಸಲು ಮುಂದಾಗಿದೆ, ಇದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಉಪಶಮನ ಸಿಗಲಿದೆ.

PAN Card Rule Changes: ಕೇಂದ್ರ ಸರ್ಕಾರವು ಆದಾಯ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಡ್ರಾಫ್ಟ್ ಇನ್‌ಕಮ್ ಟ್ಯಾಕ್ಸ್ ರೂಲ್ಸ್ 2026 ಅನ್ನು ಪರಿಚಯಿಸಿದೆ. ಈ ಮಸೂದೆ ನಿಯಮಗಳು ಜಾರಿಯಾದರೆ ಪ್ಯಾನ್ ಕಾರ್ಡ್ ಬಳಕೆಗೆ ಸಂಬಂಧಿಸಿದ ಹಲವು ಕಟ್ಟುನಿಟ್ಟಿನ ನಿಯಮಗಳು ಸಡಿಲವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ರೈತರು ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ದೊಡ್ಡ ಮಟ್ಟದ ಲಾಭ ದೊರೆಯಬಹುದು.
ಬ್ಯಾಂಕ್ ವ್ಯವಹಾರಗಳಲ್ಲಿ ಬದಲಾವಣೆ
ಇಲ್ಲಿಯವರೆಗೆ ಒಂದು ದಿನದಲ್ಲಿ ಬ್ಯಾಂಕ್‌ನಲ್ಲಿ ₹50,000 ಕ್ಕಿಂತ ಹೆಚ್ಚು ನಗದು ಜಮಾ ಮಾಡಿದರೂ ಅಥವಾ ತೆಗೆಯುತ್ತಿದ್ದರೂ ಪ್ಯಾನ್ ನೀಡುವುದು ಕಡ್ಡಾಯವಾಗಿತ್ತು. ಆದರೆ ಹೊಸ ಪ್ರಸ್ತಾವನೆಯ ಪ್ರಕಾರ, ಒಂದು ಹಣಕಾಸು ವರ್ಷದ ಒಟ್ಟು ನಗದು ವ್ಯವಹಾರಗಳು ₹10 ಲಕ್ಷ ಮೀರಿದಾಗ ಮಾತ್ರ ಪ್ಯಾನ್ ಕಡ್ಡಾಯವಾಗುವಂತೆ ಮಿತಿ ಹೆಚ್ಚಿಸುವ ಚಿಂತನೆ ಇದೆ. ಇದರಿಂದ ದಿನನಿತ್ಯದ ಸಣ್ಣ ವ್ಯವಹಾರಗಳಿಗೆ ಪ್ಯಾನ್ ಸಲ್ಲಿಸುವ ಕಷ್ಟ ಕಡಿಮೆಯಾಗಲಿದೆ.
ವಾಹನ ಖರೀದಿಯಲ್ಲಿ ಸಡಿಲಿಕೆ
ಈಗಾಗಲೇ ಯಾವುದೇ ಬೆಲೆಯ ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸಿದರೂ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. ಆದರೆ ಹೊಸ ನಿಯಮ ಜಾರಿಯಾದರೆ ₹5 ಲಕ್ಷ ಮೀರಿದ ವಾಹನಗಳಿಗೆ ಮಾತ್ರ ಪ್ಯಾನ್ ವಿವರ ಬೇಕಾಗಬಹುದು. ಕಡಿಮೆ ಬೆಲೆಯ ಬೈಕ್ ಅಥವಾ ಸಣ್ಣ ಕಾರು ಖರೀದಿಸುವವರಿಗೆ ಇದು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಹೋಟೆಲ್ ಮತ್ತು ಕಾರ್ಯಕ್ರಮ ವೆಚ್ಚ
ಮದುವೆ, ಸಮಾರಂಭ ಅಥವಾ ಹೋಟೆಲ್ ಬಿಲ್ ಪಾವತಿಸುವ ಸಂದರ್ಭದಲ್ಲೂ ಬದಲಾವಣೆ ಕಾಣಬಹುದು. ಈಗ ₹50,000 ಮೀರಿದರೆ ಪ್ಯಾನ್ ಅಗತ್ಯವಿದೆ. ಆದರೆ ಹೊಸ ಮಸೂದೆ ಪ್ರಕಾರ ₹1 ಲಕ್ಷ ಮೀರಿದ ಬಿಲ್‌ಗಳಿಗೆ ಮಾತ್ರ ಪ್ಯಾನ್ ಕಡ್ಡಾಯವಾಗುವ ಸಾಧ್ಯತೆ ಇದೆ. ಇದು ಕುಟುಂಬ ಕಾರ್ಯಕ್ರಮಗಳಿಗೆ ಖರ್ಚು ಮಾಡುವವರಿಗೆ ಉಪಶಮನ ತರಬಹುದು.
ಆಸ್ತಿ ವ್ಯವಹಾರಗಳಲ್ಲಿ ಹೊಸ ಮಿತಿ
ಭೂಮಿ, ಮನೆ ಅಥವಾ ಫ್ಲಾಟ್ ಖರೀದಿ–ಮಾರಾಟಕ್ಕೂ ಪ್ಯಾನ್ ಸಂಬಂಧಿಸಿದ ಮಿತಿ ಹೆಚ್ಚಿಸುವ ಪ್ರಸ್ತಾವವಿದೆ. ಪ್ರಸ್ತುತ ₹10 ಲಕ್ಷ ಮೀರಿದ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯವಾಗಿದೆ. ಹೊಸ ನಿಯಮ ಜಾರಿಯಾದರೆ ಈ ಮಿತಿ ₹20 ಲಕ್ಷವಾಗಬಹುದು. ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಆಸ್ತಿ ವ್ಯವಹಾರಗಳು ಇದರಿಂದ ಸುಲಭವಾಗಲಿವೆ.
ಒಟ್ಟಾರೆ, ಸರ್ಕಾರದ ಉದ್ದೇಶ ದೊಡ್ಡ ಮೊತ್ತದ ವ್ಯವಹಾರಗಳ ಮೇಲೆ ನಿಯಂತ್ರಣ ಮುಂದುವರೆಸುತ್ತಾ, ಸಣ್ಣ ವ್ಯವಹಾರಗಳಿಗೆ ಸಡಿಲಿಕೆ ನೀಡುವುದಾಗಿದೆ. ಈ ಪ್ರಸ್ತಾವನೆಗಳು ಜಾರಿಯಾದರೆ ಪ್ಯಾನ್ ಕಾರ್ಡ್ ಸಂಬಂಧಿತ ಪ್ರಕ್ರಿಯೆಗಳು ಬಳಕೆದಾರ ಸ್ನೇಹಿಯಾಗುವ ಸಾಧ್ಯತೆ ಇದೆ.



