ಡಿಸೆಂಬರ್ 31ರ ಬಳಿಕ ಹಳೆಯ ಬ್ಯಾಂಕ್ ಚೆಕ್ಬುಕ್ಗಳು ಕೆಲಸಕ್ಕೆ ಬರಲ್ಲ! ಆರ್ಬಿಐ ಸ್ಪಷ್ಟನೆ
Cheque Books: ಡಿಸೆಂಬರ್ 31ರ ಬಳಿಕ ಹಳೆಯ ಬ್ಯಾಂಕ್ ಚೆಕ್ಬುಕ್ಗಳು ಅಮಾನ್ಯವಾಗಲಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಸ್ಪಷ್ಟನೆ ನೀಡಿದೆ.

Cheque Books: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಳೆಯ ಚೆಕ್ಬುಕ್ಗಳನ್ನು ಬದಲಾಯಿಸಬೇಕೇ? ಡಿಸೆಂಬರ್ 31ರೊಳಗೆ ಹೊಸ ಚೆಕ್ಬುಕ್ ಪಡೆಯದಿದ್ದರೆ ಜನವರಿಯಿಂದ ಹಳೆಯ ಚೆಕ್ಗಳು ಕೆಲಸ ಮಾಡುವುದಿಲ್ಲವೇ? ಇಂತಹ ಪ್ರಶ್ನೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿರುವ ಸಂದೇಶದಿಂದ ಗ್ರಾಹಕರಲ್ಲಿ ಮೂಡಿವೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
ವೈರಲ್ ಸಂದೇಶದಲ್ಲಿ ಜನವರಿ 1, 2027ರಿಂದ ಬ್ಯಾಂಕುಗಳು (Banks) ಹೊಸ ಮಾದರಿಯ ಚೆಕ್ಬುಕ್ಗಳನ್ನು ನೀಡಲಿದ್ದು, ಹಳೆಯ ಚೆಕ್ಬುಕ್ಗಳನ್ನು ಬಳಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ₹50,000ಕ್ಕಿಂತ ಹೆಚ್ಚಿನ ಮೊತ್ತದ ಹಳೆಯ ಚೆಕ್ಗಳನ್ನು ಬ್ಯಾಂಕುಗಳು ಸ್ವೀಕರಿಸುವುದಿಲ್ಲ ಎಂಬ ಮಾಹಿತಿಯನ್ನೂ ಹರಡಲಾಗಿದೆ.
ಹೊಸ ಚೆಕ್ಗಳಲ್ಲಿ ಆಲ್ಫಾ ನ್ಯೂಮರಿಕ್ ಕೋಡ್, ಬದಲಾದ ಎಂಐಸಿಆರ್ ಸಂಖ್ಯೆ (MICR Number), ಯುವಿ ಕೋಡ್ (UV Code) ಸೇರಿದಂತೆ ಹಲವು ಭದ್ರತಾ ವ್ಯವಸ್ಥೆಗಳು ಇರಲಿವೆ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಹೊಸ ಚೆಕ್ಬುಕ್ಗಾಗಿ ಬ್ಯಾಂಕ್ ಶಾಖೆ ಅಥವಾ ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕ ಅರ್ಜಿ ಸಲ್ಲಿಸುವಂತೆ ಗ್ರಾಹಕರಿಗೆ ಸಲಹೆ ನೀಡಲಾಗಿತ್ತು.
ಆದರೆ ಈ ಎಲ್ಲ ಮಾಹಿತಿಯನ್ನು ಆರ್ಬಿಐ ತಳ್ಳಿಹಾಕಿದೆ. ತನ್ನ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ವೈರಲ್ ಸಂದೇಶವನ್ನು ನಕಲಿ ಎಂದು ಸ್ಪಷ್ಟಪಡಿಸಿದ್ದು, ಹಳೆಯ ಚೆಕ್ಬುಕ್ಗಳನ್ನು ಬದಲಾಯಿಸುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿದೆ.
ಹೀಗಾಗಿ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಬ್ಯಾಂಕ್ ಚೆಕ್ಬುಕ್ಗಳಿಗೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ ಮಾಹಿತಿ ಬಂದರೆ, ಅದನ್ನು ನಂಬುವ ಮೊದಲು ಆರ್ಬಿಐ ಅಥವಾ ಸಂಬಂಧಪಟ್ಟ ಬ್ಯಾಂಕಿನ ಅಧಿಕೃತ ಪ್ರಕಟಣೆ ಪರಿಶೀಲಿಸುವುದು ಉತ್ತಮ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.









