ಬೆಳ್ಳಿಯ ಮೇಲೂ ಲೋನ್ ಸಿಗುತ್ತೆ; ಆದ್ರೆ, ಮೊದಲು ತಿಳಿಯಬೇಕಾದ ಪ್ರಮುಖ ವಿಷಯಗಳಿವು

Silver Loan: ಅತ್ಯಾವಶ್ಯಕವಾಗಿ ಹಣ ಬೇಕಾದಾಗ ಬಂಗಾರ ಇಲ್ಲದೆ ಚಿಂತೆಪಡಬೇಕಿಲ್ಲ. ಮನೆಯಲ್ಲಿರುವ ಬೆಳ್ಳಿ ವಸ್ತುಗಳ ಮೇಲೂ ಲೋನ್ ಪಡೆಯಬಹುದು. ಆದರೆ ಬೆಳ್ಳಿ ಲೋನ್ ತೆಗೆದುಕೊಳ್ಳುವ ಮುನ್ನ ಕೆಲವು ಪ್ರಮುಖ ನಿಯಮಗಳು ತಿಳಿದಿರಬೇಕು.

Silver Loan : ಹಣದ ತುರ್ತು ಅವಶ್ಯಕತೆ ಬಂದಾಗ ಬಹುತೇಕ ಜನರು ಮೊದಲು ಯೋಚಿಸುವುದು ಗೋಲ್ಡ್ ಲೋನ್ (Gold Loan) ಬಗ್ಗೆ. ಆದರೆ ಹಲವರ ಮನೆಗಳಲ್ಲಿ ಬಂಗಾರ ಕಡಿಮೆ ಅಥವಾ ಇಲ್ಲದಿರುವ ಸಂದರ್ಭಗಳೂ ಇರುತ್ತವೆ.

ಇಂತಹ ಸಂದರ್ಭದಲ್ಲಿ ಮನೆದಲ್ಲಿರುವ ಬೆಳ್ಳಿ ವಸ್ತುಗಳು ಕೂಡ ಹಣಕಾಸಿನ ಸಹಾಯವಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಕೆಲವು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಬೆಳ್ಳಿ ಮೇಲೆ (Silver Loan) ಸಾಲ ನೀಡಲು ಆರಂಭಿಸಿವೆ.

ಪೂಜಾ ಕೊಠಡಿಯಲ್ಲಿ ಇರುವ ಬೆಳ್ಳಿ ಪಾತ್ರೆಗಳು, ಬೆಳ್ಳಿ ನಾಣ್ಯಗಳು ಅಥವಾ ಬೆಳ್ಳಿ ಆಭರಣಗಳು ಇದ್ದರೆ ಅವನ್ನು ಅಡ ಇಟ್ಟು ಹಣ ಪಡೆಯುವ ಅವಕಾಶ ಇದೆ. ಆದರೆ ಇದನ್ನು ಮಾಡುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಬೆಳ್ಳಿಯ ಸಂಪೂರ್ಣ ಮೌಲ್ಯಕ್ಕೆ ಲೋನ್ ಸಿಗುವುದಿಲ್ಲ

ಹೆಚ್ಚಿನ ಜನರು ಒಂದು ಸಾಮಾನ್ಯ ತಪ್ಪು ಕಲ್ಪನೆ ಹೊಂದಿರುತ್ತಾರೆ. ತಮ್ಮ ಬಳಿ ಇರುವ ಬೆಳ್ಳಿ ಮೌಲ್ಯ ₹1 ಲಕ್ಷ ಇದ್ದರೆ ಅಷ್ಟೇ ಮೊತ್ತವನ್ನು ಸಾಲವಾಗಿ ಪಡೆಯಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಬೆಳ್ಳಿ ಮೌಲ್ಯದ ಸುಮಾರು 75ರಿಂದ 85 ಶೇಕಡಾವರೆಗೆ ಮಾತ್ರ ಸಾಲ ನೀಡುತ್ತವೆ.

ಉದಾಹರಣೆಗೆ, ನಿಮ್ಮ ಬೆಳ್ಳಿಯ ಮೌಲ್ಯ ₹1 ಲಕ್ಷ ಇದ್ದರೆ ಗರಿಷ್ಠವಾಗಿ ಸುಮಾರು ₹80,000–₹85,000 ಮಾತ್ರ ಲೋನ್ ಸಿಗಬಹುದು. ಉಳಿದ ಮೊತ್ತವನ್ನು ಬ್ಯಾಂಕ್‌ಗಳು ಸುರಕ್ಷತಾ ಮಾರುಜಿನ್‌ ಆಗಿ ಕಾಯ್ದಿರಿಸುತ್ತವೆ.

ಬೆಳ್ಳಿ ಬೆಲೆಗಳಲ್ಲಿ ತೀವ್ರ ಏರುಪೇರು

ಬಂಗಾರಗಿಂತ ಬೆಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚು ವೇಗವಾಗಿ ಬದಲಾಗುತ್ತದೆ. ಒಂದು ದಿನದ ಬೆಲೆ ಇನ್ನೊಂದು ದಿನದಲ್ಲಿ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು. ಈ ಕಾರಣದಿಂದಲೇ ಬ್ಯಾಂಕ್‌ಗಳು ಸಂಪೂರ್ಣ ಮೌಲ್ಯಕ್ಕೆ ಸಾಲ ನೀಡುವುದಿಲ್ಲ.

ಒಂದು ವೇಳೆ ಬೆಳ್ಳಿ ಬೆಲೆಗಳು ಹಠಾತ್ ಕುಸಿದರೆ ಬ್ಯಾಂಕ್‌ಗೆ ನಷ್ಟವಾಗದಂತೆ ನೋಡಿಕೊಳ್ಳಲು ಹಣಕಾಸು ಸಂಸ್ಥೆಗಳು ಮುಂಚಿತವಾಗಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತವೆ.

ಯಾವ ಬೆಳ್ಳಿ ವಸ್ತುಗಳಿಗೆ ಲೋನ್ ಸಿಗುತ್ತದೆ?

ಎಲ್ಲಾ ಬೆಳ್ಳಿ ವಸ್ತುಗಳಿಗೆ ಸಮಾನ ಮೌಲ್ಯ ಸಿಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಆಭರಣಗಳು ಮತ್ತು ನಾಣ್ಯಗಳು:

ಇವುಗಳ ಶುದ್ಧತೆ (purity) ಸುಲಭವಾಗಿ ಅಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಇಂತಹ ವಸ್ತುಗಳ ಮೇಲೆ ಲೋನ್ ಪಡೆಯುವುದು ಸಾಮಾನ್ಯವಾಗಿ ಸುಲಭ.

ಪಾತ್ರೆಗಳು ಮತ್ತು ಅಲಂಕಾರ ವಸ್ತುಗಳು:

ಕೆಲವು ಬ್ಯಾಂಕ್‌ಗಳು ಬೆಳ್ಳಿ ಪಾತ್ರೆಗಳನ್ನು ಅಡವಾಗಿ ಸ್ವೀಕರಿಸಲು ಹಿಂಜರಿಯುತ್ತವೆ. ಒಪ್ಪಿಕೊಂಡರೂ ಅವುಗಳಿಗೆ ಕಡಿಮೆ ಮೌಲ್ಯ ನಿಗದಿಪಡಿಸುವ ಸಾಧ್ಯತೆ ಇದೆ.

ಮೇಕಿಂಗ್ ಚಾರ್ಜ್ ಪರಿಗಣನೆ ಇಲ್ಲ:

ನೀವು ಬೆಳ್ಳಿ ವಸ್ತು ಖರೀದಿಸುವಾಗ ಕೊಟ್ಟ ಡಿಸೈನ್ ಅಥವಾ ಮೇಕಿಂಗ್ ಚಾರ್ಜ್‌ಗಳನ್ನು ಬ್ಯಾಂಕ್‌ಗಳು ಪರಿಗಣಿಸುವುದಿಲ್ಲ. ಕೇವಲ ಬೆಳ್ಳಿಯ ತೂಕ ಮತ್ತು ಶುದ್ಧತೆಯ ಆಧಾರದ ಮೇಲೆ ಮಾತ್ರ ಮೌಲ್ಯ ನಿಗದಿಯಾಗುತ್ತದೆ.

ಲೋನ್ ಪಡೆಯುವ ಮೊದಲು ಗಮನಿಸಬೇಕಾದುದು

ಬಂಗಾರದ ಬೆಲೆ ಗ್ರಾಂಗೆ ಸಾವಿರಗಳಲ್ಲಿ ಇದ್ದರೆ, ಬೆಳ್ಳಿಯ ಬೆಲೆ ಸಾಮಾನ್ಯವಾಗಿ ನೂರರಲ್ಲಿ ಇರುತ್ತದೆ. ಆದ್ದರಿಂದ ದೊಡ್ಡ ಮೊತ್ತದ ಸಾಲ ಬೇಕಾದರೆ ನಿಮ್ಮ ಬಳಿ ಹೆಚ್ಚಿನ ಪ್ರಮಾಣದ ಬೆಳ್ಳಿ ಇರಬೇಕಾಗುತ್ತದೆ.

ಇದಲ್ಲದೆ ಕೆಲವು ಬ್ಯಾಂಕ್‌ಗಳು ಒಬ್ಬ ವ್ಯಕ್ತಿಯಿಂದ ಎಷ್ಟು ಬೆಳ್ಳಿ ಸ್ವೀಕರಿಸಬಹುದು ಎಂಬುದಕ್ಕೂ ಗರಿಷ್ಠ ಮಿತಿ ನಿಗದಿಪಡಿಸಿರುತ್ತವೆ. ಆದ್ದರಿಂದ ಬೆಳ್ಳಿ ಮೇಲೆ ಲೋನ್ ತೆಗೆದುಕೊಳ್ಳುವ ಮೊದಲು ಬಡ್ಡಿದರ, ಪ್ರಾಸೆಸಿಂಗ್ ಫೀ, ನಿಯಮಗಳು ಇತ್ಯಾದಿಗಳನ್ನು ಪರಿಶೀಲಿಸಿ ನಂತರವೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

Related Stories