Home Loan: ಹೋಮ್ ಲೋನ್ನ ಈ ಸೀಕ್ರೆಟ್ಗಳು ನಿಮ್ಮ ಹಣ ಉಳಿಸುತ್ತವೆ! ಬಂಪರ್ ಲಾಭ
Home Loan: ಹೋಮ್ ಲೋನ್ ತೆಗೆದುಕೊಳ್ಳುವ ಮುನ್ನ ಸರಿಯಾದ ಯೋಜನೆ ತೆರಿಗೆ ನಿಯಮಗಳ ಅರಿವು ಹಾಗೂ ಪಾವತಿ ವಿಧಾನ ತಿಳಿದಿದ್ದರೆ ನಿಮ್ಮ ಸೊಂತ ಮನೆ ಕನಸು ಒತ್ತಡವಿಲ್ಲದೇ ಸಾಕಷ್ಟು ಹಣ ಉಳಿಸಿಕೊಂಡೇ ಸಾಧ್ಯವಾಗುತ್ತದೆ

Home Loan: ಸ್ವಂತ ಮನೆ ಎನ್ನುವುದು ಕೇವಲ ಕನಸು ಮಾತ್ರ ಅಲ್ಲ, ದೀರ್ಘಕಾಲೀನ ಹಣಕಾಸು ನಿರ್ಧಾರವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಹೋಮ್ ಲೋನ್ ಸೌಲಭ್ಯ ಲಭ್ಯವಾಗಿರುವುದರಿಂದ ಯುವಕರು ಕೂಡ ಬೇಗನೇ ತಮ್ಮ ಮನೆ ಕನಸನ್ನು ಸಾಕಾರ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಲೋನ್ ತೆಗೆದುಕೊಳ್ಳುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸದೇ ಹೋದರೆ ಅದೇ ಕನಸು ಮುಂದಿನ ದಿನಗಳಲ್ಲಿ ಭಾರವಾಗಬಹುದು.
ರೆಡಿಯಾದ ಮನೆ ಖರೀದಿ, ಪ್ಲಾಟ್ ಖರೀದಿ ಮಾಡಿ ಮನೆ ಕಟ್ಟುವುದು – ಈ ಎರಡರಲ್ಲೂ ಬ್ಯಾಂಕ್ ಲೋನ್ ವಿಧಾನದಲ್ಲಿ ವ್ಯತ್ಯಾಸವಿದೆ. ಸ್ವಂತ ಜಾಗದಲ್ಲಿ ಮನೆ ನಿರ್ಮಾಣ ಮಾಡುವಾಗ, ಬ್ಯಾಂಕ್ ಸಂಪೂರ್ಣ ಹಣವನ್ನು ಒಂದೇ ಬಾರಿ ಬಿಡುಗಡೆ ಮಾಡುವುದಿಲ್ಲ. ಕಟ್ಟಡದ ಪ್ರಗತಿಗೆ ಅನುಗುಣವಾಗಿ ಹಂತ ಹಂತವಾಗಿ ಹಣ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀವು ಕಟ್ಟುವ ಬಡ್ಡಿಯನ್ನು ಪ್ರೀ-EMI ಎಂದು ಕರೆಯಲಾಗುತ್ತದೆ.
ಪಾವತಿ ಶುರುವಾಗೋದು ಯಾವಾಗ?
ನಿರ್ಮಾಣ ಪೂರ್ಣಗೊಂಡು ಸಂಪೂರ್ಣ ಲೋನ್ ಬಿಡುಗಡೆ ಆದ ನಂತರವೇ ನಿಮ್ಮ ನಿಯಮಿತ EMI ಆರಂಭವಾಗುತ್ತದೆ. ಈ ವಿಷಯವನ್ನು ಮೊದಲೇ ತಿಳಿದಿದ್ದರೆ, ತಿಂಗಳ ಬಜೆಟ್ನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಹೋಮ್ ಲೋನ್ನಿಂದ ತೆರಿಗೆ ಲಾಭ
ಹೋಮ್ ಲೋನ್ ಮೂಲಕ ತೆರಿಗೆ ಉಳಿತಾಯ ಮಾಡುವ ಅವಕಾಶ ಹೆಚ್ಚು. ಹಳೆಯ ತೆರಿಗೆ ವ್ಯವಸ್ಥೆಯಡಿ, ಸೆಕ್ಷನ್ 80C ಅಡಿಯಲ್ಲಿ ರೂ.1.50 ಲಕ್ಷದವರೆಗೆ ವಿನಾಯಿತಿ ಸಿಗುತ್ತದೆ. ಅದೇ ರೀತಿ ಸೆಕ್ಷನ್ 24(b) ಅಡಿಯಲ್ಲಿ ಸ್ವಂತ ವಾಸದ ಮನೆಯ ಬಡ್ಡಿಗೆ ರೂ.2 ಲಕ್ಷದವರೆಗೆ ತೆರಿಗೆ ಲಾಭ ಪಡೆಯಬಹುದು. ಮನೆ ಪೂರ್ಣಗೊಳ್ಳುವ ಮೊದಲು ಕಟ್ಟಿದ ಬಡ್ಡಿಯನ್ನು, ನಿರ್ಮಾಣ ಮುಗಿದ ಬಳಿಕ ಐದು ಸಮಾನ ಹಂತಗಳಲ್ಲಿ ಕ್ಲೈಮ್ ಮಾಡಬಹುದು.
ಹೊಸ ಮತ್ತು ಹಳೆಯ ತೆರಿಗೆ ವ್ಯವಸ್ಥೆ ವ್ಯತ್ಯಾಸ
ಹಳೆಯ ತೆರಿಗೆ ವ್ಯವಸ್ಥೆ ಹೋಮ್ ಲೋನ್ ಹೊಂದಿರುವವರಿಗೆ ಹೆಚ್ಚು ಅನುಕೂಲಕರ. ಆದರೆ ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿದರೆ, ಸ್ವಂತ ವಾಸದ ಮನೆಗೆ ಬಡ್ಡಿ ವಿನಾಯಿತಿ ಇರುವುದಿಲ್ಲ.
ಕಾಲಮಿತಿಯ ನಿಯಮ ಬಹಳ ಮುಖ್ಯ
ಲೋನ್ ಪಡೆದ ಆರ್ಥಿಕ ವರ್ಷದ ಅಂತ್ಯದಿಂದ ಐದು ವರ್ಷಗಳೊಳಗೆ ಮನೆ ನಿರ್ಮಾಣ ಮುಗಿಯಬೇಕು. ವಿಳಂಬವಾದರೆ ಬಡ್ಡಿ ಮೇಲಿನ ರೂ.2 ಲಕ್ಷ ವಿನಾಯಿತಿ ರೂ.30,000ಕ್ಕೆ ಸೀಮಿತವಾಗುತ್ತದೆ. ಹೀಗಾಗಿ ಸಮಯ ಪಾಲನೆ ಹಣಕಾಸಿನ ದೃಷ್ಟಿಯಿಂದ ಅತ್ಯಂತ ಅಗತ್ಯ.
ಸರಿಯಾದ ಯೋಜನೆ, ಸಮಯಕ್ಕೆ ನಿರ್ಮಾಣ ಮತ್ತು ತೆರಿಗೆ ನಿಯಮಗಳ ಅರಿವು ಇದ್ದರೆ, ಹೋಮ್ ಲೋನ್ ನಿಮ್ಮ ಸ್ವಂತ ಮನೆ ಕನಸನ್ನು ಭಾರವಲ್ಲ, ಲಾಭದ ಹೂಡಿಕೆಯನ್ನಾಗಿ ಮಾಡುತ್ತದೆ.




