ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ! ಬೆಳಗಾವಿಯಲ್ಲಿ ಪ್ರಕರಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಗಂಡು ಮಗು ಹುಟ್ಟಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ ವಿಚಾರ ಗಲಾಟೆಗೆ ತಿರುಗಿ, ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಕ್ಷಣಿಕ ಕೋಪವೇ ಭೀಕರ ದುರಂತಕ್ಕೆ ಕಾರಣವಾಗಿದೆ. ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಪಾರ್ಟಿ ನೀಡುವಂತೆ ಕೇಳಿದ ಸ್ನೇಹಿತನ ಮೇಲೆ ಕೋಪಗೊಂಡ ವ್ಯಕ್ತಿ, ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಮೃತರನ್ನು ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ವಿಶ್ವನಾಥ ಪೂಜೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನೇಸರಗಿ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ.

ಘಟನೆಯ ವೇಳೆ ಇಬ್ಬರೂ ಗ್ರಾಮದ ಕಟ್ಟೆಯ ಬಳಿ ಕುಳಿತು ಮದ್ಯ ಸೇವಿಸುತ್ತಾ ಮಾತನಾಡುತ್ತಿದ್ದರು. ಇದೇ ವೇಳೆ ಹಣಮಂತಪ್ಪ, ವಿಶ್ವನಾಥನಿಗೆ ಗಂಡು ಮಗು ಹುಟ್ಟಿದ ಸಂಭ್ರಮಕ್ಕೆ ಪಾರ್ಟಿ ಕೊಡಬೇಕು ಎಂದು ಕೇಳಿದ್ದಾನೆ. ಈ ಮಾತು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಪರಿಸ್ಥಿತಿ ಕೈಮೀರಿದೆ.

ಗಲಾಟೆಯ ವೇಳೆ ಹಣಮಂತಪ್ಪನ ಕೈ ವಿಶ್ವನಾಥನ ಕಣ್ಣಿಗೆ ತಾಗಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿ ಸಮೀಪದಲ್ಲಿದ್ದ ಕಲ್ಲನ್ನು ಎತ್ತಿ ಹಣಮಂತಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಹಣಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆ ಶೋಕದ ವಾತಾವರಣ ನಿರ್ಮಿಸಿದೆ. ಕೊಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಶೀಘ್ರವೇ ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories