ರಾಜಸ್ಥಾನದ ಇಬ್ಬರು ಯುವಕರನ್ನು ಅಪಹರಿಸಿ ಕಾರಿನ ಸಮೇತ ಸಜೀವ ದಹನ
ಭರತ್‌ಪುರದ ಇಬ್ಬರು ಯುವಕರನ್ನು ಅಪಹರಿಸಿ ಸಜೀವ ದಹನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕರನ್ನು ಮೊದಲು ಅಪಹರಿಸಿ, ನಂತರ ಹರಿಯಾಣದಲ್ಲಿ ಅವರ ಕಾರಿನೊಂದಿಗೆ ಸಜೀವ ದಹನ ಮಾಡಲಾಗಿದೆ.
ರಾಜಸ್ಥಾನದ ಇಬ್ಬರು ಯುವಕರನ್ನು ಅಪಹರಿಸಿ ಕಾರಿನ ಸಮೇತ ಸಜೀವ ದಹನ ಮಾಡಿರುವ ಪ್ರಕರಣ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಹರಿಯಾಣದ ಭಿವಾನಿಯಲ್ಲಿರುವ ಬರ್ವಾಸ್ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸ್ಥಳೀಯರು ಸುಟ್ಟ ಕಾರಿನಲ್ಲಿ ಇಬ್ಬರು ಯುವಕರ ಅಸ್ಥಿಪಂಜರಗಳನ್ನು ಪತ್ತೆ ಮಾಡಿದ್ದಾರೆ.
ಈ ಬಗ್ಗೆ ಜನರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬೊಲೆರೋ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಸಂತ್ರಸ್ತರ ಕುಟುಂಬವು ಇಬ್ಬರೂ ಯುವಕರನ್ನು ಮೊದಲು ಅಪಹರಿಸಲಾಯಿತು, ನಂತರ ಹರಿಯಾಣದಲ್ಲಿ ಕಾರಿನೊಂದಿಗೆ ಜೀವಂತವಾಗಿ ಸುಟ್ಟು ಹಾಕಲಾಯಿತು ಎಂದು ಹೇಳುತ್ತಾರೆ.
ಈ ಅಸ್ಥಿಪಂಜರಗಳು ಅಪಹರಣಕ್ಕೊಳಗಾದ ಯುವಕರಿಗೆ ಸೇರಿದ್ದು, ಇದನ್ನು ಖಚಿತಪಡಿಸಲು ವಿಧಿವಿಜ್ಞಾನ ತನಿಖೆ ನಡೆಸಲಾಗುವುದು ಎಂದು ಭರತ್‌ಪುರ ಐಜಿ ಗೌರವ್ ಶ್ರೀವಾಸ್ತವ ಹೇಳಿದ್ದಾರೆ.
ಡಿಎನ್‌ಎ ಪರೀಕ್ಷೆ ಕೂಡ ನಡೆಯಲಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಯಾರ ವಿರುದ್ಧ ಅಪಹರಣ ಆರೋಪವಿದೆಯೋ ಅವರನ್ನು ಶೋಧಿಸಲಾಗುತ್ತಿದೆ ಎಂದು ಐಜಿ ತಿಳಿಸಿದ್ದಾರೆ. ಆತನ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ.
ಇಬ್ಬರನ್ನು ಅಪಹರಿಸಿ ಸಜೀವ ದಹನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಪೈಕಿ ಒಬ್ಬರ ವಿರುದ್ಧ ಹಸು ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಕಾರಣವೇನು ಮತ್ತು ಕಿಡ್ನಾಪರ್‌ಗಳು ಯುವಕರನ್ನು ಜೀವಂತ ಸುಟ್ಟು ಹಾಕಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2 youths of Bharatpur were kidnapped, then burnt alive along with their car in Haryana