ಕಾರಿನಿಂದ ಹೊರಗೆಳೆದು ಕಾಲುವೆಗೆ ತಳ್ಳಿದ ದುಷ್ಕರ್ಮಿಗಳು; ನೀರಲ್ಲಿ ಮುಳುಗಿ ಮೂವರು ಸಾವು, ಬಾಲಕ ಪಾರು
ಮಹಾರಾಷ್ಟ್ರದಿಂದ ಗುಜರಾತ್‌ಗೆ ಕಾರಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಆರು ಮಂದಿಯನ್ನು ದುಷ್ಕರ್ಮಿಗಳು ಕಾಲುವೆಗೆ ತಳ್ಳಿದ್ದಾರೆ. ಘಟನೆಯಲ್ಲಿ ದಂಪತಿ ಸೇರಿದಂತೆ ಮೂವರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. 13 ವರ್ಷದ ಬಾಲಕ ಮಾತ್ರ ಈಜಿಕೊಂಡು ದಡ ಸೇರಿ ಬದುಕುಳಿದಿದ್ದಾನೆ.

- ಆರು ಮಂದಿಯನ್ನು ಕಾಲುವೆಗೆ ತಳ್ಳಿದ ದುಷ್ಕರ್ಮಿಗಳು
- ದಂಪತಿ, ಒಂಬತ್ತು ವರ್ಷದ ಬಾಲಕಿ ಸಾವು
- 13 ವರ್ಷದ ಬಾಲಕನಿಂದ ಪೊಲೀಸರಿಗೆ ಮಾಹಿತಿ
ಗುಜರಾತ್‌ನ ಬಾರ್ಡೋಲಿ ತಾಲೂಕಿನಲ್ಲಿ ನಡೆದಿರುವ ಈ ಭೀಕರ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಮಹಾರಾಷ್ಟ್ರದ ಜಲ್ಗಾವ್ ಮೂಲದ ನಿತಿನ್ ಅಲಿಯಾಸ್ ಭುರಿಯಾ ಪಾಟೀಲ್ ಅವರ ಕುಟುಂಬದ ಆರು ಮಂದಿ ಕಾರಿನಲ್ಲಿ ಸೂರತ್‌ಗೆ ಪ್ರಯಾಣಿಸುತ್ತಿದ್ದರು. ನವೆಂಬರ್ 21ರಂದು ರಾತ್ರಿ ಉವಾ ಗ್ರಾಮದ ಸಮೀಪ ಅವರ ಕಾರನ್ನು ಮತ್ತೊಂದು ವಾಹನದಲ್ಲಿ ಬಂದಿದ್ದ ನಾಲ್ವರು ವ್ಯಕ್ತಿಗಳು ಅಡ್ಡಗಟ್ಟಿದ್ದಾರೆ.
ಬಳಿಕ ಕುಟುಂಬದ ಸದಸ್ಯರನ್ನು ಬಲವಂತವಾಗಿ ಕಾರಿನಿಂದ ಹೊರತೆಗೆದು ಸಮೀಪದ ಕಾಲುವೆಗೆ ತಳ್ಳಿದ್ದಾರೆ ಎನ್ನಲಾಗಿದೆ. ಈ ವೇಳೆ ಆರು ಮಂದಿಯೂ ನೀರಿನಲ್ಲಿ ಮುಳುಗಿದ್ದು, ಘಟನೆಯ ಹಿಂದಿನ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ನಿತಿನ್ ಪಾಟೀಲ್, ಅವರ ಪತ್ನಿ ಕವಿತಾ ಮತ್ತು ಒಂಬತ್ತು ವರ್ಷದ ಮಗಳು ಮೃತಪಟ್ಟಿದ್ದಾರೆ. ಮಹುವಾ ಸಮೀಪದ ಕಾಲುವೆಯಲ್ಲಿ ಮೂವರ ಶವಗಳು ಪತ್ತೆಯಾಗಿವೆ. ಆದರೆ ಕುಟುಂಬದ ಇನ್ನಿಬ್ಬರು ಸದಸ್ಯರಾದ ಎರಡು ವರ್ಷದ ಮಗು ಹಾಗೂ 16 ವರ್ಷದ ಬಾಲಕನ ಸುಳಿವು ಇನ್ನೂ ಸಿಕ್ಕಿಲ್ಲ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಘಟನೆಯಲ್ಲಿ 13 ವರ್ಷದ ಬಾಲಕನೊಬ್ಬ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಕಾಲುವೆಗೆ ಬಿದ್ದ ಬಳಿಕ ಧೈರ್ಯದಿಂದ ಈಜಿಕೊಂಡು ದಡ ಸೇರಿದ್ದಾನೆ. ನಂತರ ಅಲ್ಲಿಂದ ಹೊರಬಂದ ಬಾಲಕ ಭಾನುವಾರ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಆತನ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ತನಿಖೆಗೆ ಮಹತ್ವದ ಸುಳಿವು ಲಭಿಸಿದೆ.
ಮತ್ತೊಂದೆಡೆ, ಬದುಕುಳಿದ ಬಾಲಕನ ದೊಡ್ಡ ಸಹೋದರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಗುರುತಿಸಿರುವುದಾಗಿ ತಿಳಿಸಿದ್ದಾರೆ. ಅವರನ್ನು ಬಂಧಿಸಲು ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ನಾಪತ್ತೆಯಾಗಿರುವ ಮಕ್ಕಳ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ.
ಒಂದು ಕುಟುಂಬದ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿರುವ ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕವನ್ನು ಹೆಚ್ಚಿಸಿದೆ. ಆರೋಪಿಗಳ ಬಂಧನದ ಬಳಿಕ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.



