ಕೋರ್ಟ್ ಎದುರೇ ಕೊಲೆ ಆರೋಪಿ ಮೇಲೆ ದಾಳಿ; ಕೈ ಕತ್ತರಿಸಿ, ಗುಂಡು ಹಾರಿಸಿ ಪರಾರಿ
ಕೊಲೆ ಪ್ರಕರಣದ ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿಯ ಮೇಲೆ ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಗುಂಡು ಹಾರಿಸಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಎರಡು ಸ್ಕೂಟರ್ಗಳಲ್ಲಿ ಪರಾರಿಯಾಗಿದ್ದಾರೆ.

- ನ್ಯಾಯಾಲಯದ ಆವರಣದ ಬಳಿ ಭೀಕರ ದಾಳಿ
- ಮಚ್ಚಿನಿಂದ ಹಲ್ಲೆ, ಗುಂಡಿನ ದಾಳಿ
- ಎರಡು ಸ್ಕೂಟರ್ಗಳಲ್ಲಿ ದುಷ್ಕರ್ಮಿಗಳು ಪರಾರಿ
ಪುಣೆಯ ನ್ಯಾಯಾಲಯದ ಬಳಿ ಹಾಡಹಗಲೇ ನಡೆದ ಮಾರಕ ದಾಳಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಚಾರಣೆಗೆ ಹಾಜರಾಗಲು ಬಂದಿದ್ದ ಕೊಲೆ ಪ್ರಕರಣದ ಆರೋಪಿಯನ್ನೇ ಗುರಿಯಾಗಿಸಿಕೊಂಡ ದುಷ್ಕರ್ಮಿಗಳ ತಂಡ ಮಚ್ಚು ಮತ್ತು ಬಂದೂಕಿನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.
ದಾಳಿಗೊಳಗಾದ ವ್ಯಕ್ತಿಯನ್ನು ಮಂದಾರ್ ಮಾರುತಿ ಕಿವಳೆ (Mandar Maruti Kivale) ಎಂದು ಗುರುತಿಸಲಾಗಿದೆ. ನ್ಯಾಯಾಲಯಕ್ಕೆ ಆಗಮಿಸಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಆತನ ಮೇಲೆ ಮುಗಿಬಿದ್ದಿದ್ದಾರೆ. ಮೊದಲು ಮಚ್ಚಿನಿಂದ ಹಲ್ಲೆ ನಡೆಸಿ, ಬಳಿಕ ಗುಂಡು ಹಾರಿಸಿದ್ದಾರೆ. ದಾಳಿಯ ನಂತರ ಆತ ಫುಟ್ಪಾತ್ ಮೇಲೆ ಬಿದ್ದಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳದಿಂದ ಆರೋಪಿಗಳು ಎರಡು ಸ್ಕೂಟರ್ಗಳಲ್ಲಿ ಪರಾರಿಯಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿರುವ ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಮಂದಾರ್ ವಿರುದ್ಧ ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣವೇ ದಾಳಿಗೆ ಕಾರಣವಾಗಿರಬಹುದು ಎಂಬ ಹಿನ್ನೆಲೆಯಲ್ಲಿ ಆತನ ಹಿಂದಿನ ಅಪರಾಧದ ವಿವರಗಳೂ ಗಮನ ಸೆಳೆದಿವೆ. ಪೊಲೀಸ್ ಮಾಹಿತಿಯ ಪ್ರಕಾರ, ಭೂಮಿ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯದಿಂದ 2025ರ ಏಪ್ರಿಲ್ 20ರಂದು ಪುಣೆಯ ಸಂತೋಷ್ನಗರ ಕತ್ರಾಜ್ ಪ್ರದೇಶದಲ್ಲಿ ಶುಭಂ ಸುಭಾಷ್ ಚವಾಣ್ (Shubham Subhash Chavan) ಎಂಬುವವರ ಕೊಲೆ ನಡೆದಿತ್ತು.
ಈ ಪ್ರಕರಣದಲ್ಲಿ ಮಂದಾರ್ ಆರೋಪಿಯಾಗಿದ್ದು, ಜೈಲು ಸೇರಿದ್ದನು. ನಾಲ್ಕು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ, ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಬಂದಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ನ್ಯಾಯಾಲಯದಂತಹ ಪ್ರಮುಖ ಸ್ಥಳದ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



