ಪವರ್ ಬ್ಯಾಂಕ್ ಸ್ಫೋಟ! ಹೈದರಾಬಾದ್‌ನಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ
ಹೈದರಾಬಾದ್‌ನಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡು ಹೊಗೆ ತುಂಬಿದ ಪರಿಣಾಮ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಹೈದರಾಬಾದ್‌ನಿಂದ ಚಂಡೀಗಢಕ್ಕೆ ಹೊರಟಿದ್ದ IndiGo ಸಂಸ್ಥೆಯ 6E108 ವಿಮಾನದಲ್ಲಿ ಅನಿರೀಕ್ಷಿತ ಘಟನೆ ಸಂಭವಿಸಿ ಕೆಲ ಕ್ಷಣಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಮಾನದಲ್ಲಿ ಹೊಗೆ ಹರಡಿದ ಪರಿಣಾಮ ಪ್ರಯಾಣಿಕರು ಗಾಬರಿಗೊಂಡರು.
ಮಾಹಿತಿಯ ಪ್ರಕಾರ, ಚಂಡೀಗಢದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಪಾರ್ಕಿಂಗ್ ವೇಳೆ ಒಬ್ಬ ಪ್ರಯಾಣಿಕನ ಪವರ್ ಬ್ಯಾಂಕ್‌ನಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಕ್ಯಾಬಿನ್ ಒಳಗೆ ಹೊಗೆ ಹರಡಿದ್ದು, ಪ್ರಯಾಣಿಕರು ಆತಂಕದಿಂದ ಹೊರಬರಲು ಯತ್ನಿಸಿದರು.
ಆದರೆ, ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ತುರ್ತು ಕ್ರಮಗಳನ್ನು ಅನುಸರಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಯಾವುದೇ ಗಾಯಗಳ ವರದಿ ಆಗಿಲ್ಲ.
ವಿಮಾನಯಾನ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆ ಎಂದು ತಿಳಿಸಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಹಾಯಕ್ಕಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಈ ಘಟನೆಗೆ ಕಾರಣವಾದ ಪವರ್ ಬ್ಯಾಂಕ್ ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಮಾನದ ತಾಂತ್ರಿಕ ಪರಿಶೀಲನೆ ನಡೆಸಲಾಗುವುದು ಮತ್ತು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸಿದ ಬಳಿಕವೇ ಸೇವೆ ಮರು ಆರಂಭವಾಗಲಿದೆ. Directorate General of Civil Aviation ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.
ಈ ಘಟನೆ ವಿಮಾನ ಸುರಕ್ಷತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದ್ದು, ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯ ಬಗ್ಗೆ ಎಚ್ಚರಿಕೆಯ ಅಗತ್ಯತೆಯನ್ನು ಒತ್ತಿಹೇಳಿದೆ.



