ಸಿನಿಮಾ ಸ್ಟೈಲ್ ಕಿಡ್ನಾಪ್‌ಗೆ ಟ್ವಿಸ್ಟ್! ಇಲ್ಲಿದೆ ಬೆಚ್ಚಿಬೀಳಿಸುವ ಸಿಸಿಟಿವಿ ವೈರಲ್ ವಿಡಿಯೋ
ಮಧ್ಯಪ್ರದೇಶದ ಶಿವಪುರಿಯಲ್ಲಿ ಮಹಿಳೆ ಮತ್ತು ಮಗು ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದು, ಬಳಿಕ ಹೊರಬಂದ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

- ಮಹಿಳೆ, ಮಗು ಅಪಹರಣ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ಲಿವ್-ಇನ್ ಸಂಗಾತಿಯೇ ಕಿಡ್ನಾಪ್ ಆರೋಪದಲ್ಲಿ ಹೆಸರು
- ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಅಪಹರಣ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಧ್ಯರಾತ್ರಿ ಕೆಲವರು ಶಸ್ತ್ರಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಮಹಿಳೆ ಹಾಗೂ ಮೂರು ತಿಂಗಳ ಮಗುವನ್ನು ಕರೆದೊಯ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಆದರೆ ಪ್ರಕರಣ ತನಿಖೆ ಮುಂದುವರಿದಂತೆ ಅಚ್ಚರಿಯ ತಿರುವೊಂದು ಹೊರಬಂದಿದೆ. ಅಪಹರಣಕ್ಕೊಳಗಾದ ಮೆಹಕ್ ಗುಹಾರಿಯಾ ತಾನೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ, “ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದಲೇ ಪುಷ್ಪೇಂದ್ರ ಚೌಹಾನ್ ಜೊತೆ ಬಂದಿದ್ದೇನೆ” ಎಂದು ಹೇಳಿದ್ದಾಳೆ.
ಮೆಹಕ್ ಮತ್ತು ಪುಷ್ಪೇಂದ್ರ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಇಂದೋರ್‌ನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆದರೆ ಕಳೆದ ವರ್ಷ ಇಬ್ಬರ ನಡುವೆ ಮನಸ್ತಾಪ ಉಂಟಾದ ಬಳಿಕ ಮೆಹಕ್ ತನ್ನ ಮೂರು ತಿಂಗಳ ಮಗುವಿನೊಂದಿಗೆ ತಾಯಿಯ ಮನೆಗೆ ಶಿವಪುರಿಗೆ ಮರಳಿದ್ದಳು.
ಈ ನಡುವೆ ಮೇ 8ರ ರಾತ್ರಿ ಪುಷ್ಪೇಂದ್ರ ತನ್ನ ಸ್ನೇಹಿತರೊಂದಿಗೆ ಮನೆಗೆ ನುಗ್ಗಿ, ಕುಟುಂಬಸ್ಥರನ್ನು ಬೆದರಿಸಿ ಮೆಹಕ್ ಮತ್ತು ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮಹಿಳೆಯ ತಾಯಿ ನೀಲಂ ಗುಹಾರಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಪೊಲೀಸರು ಪುಷ್ಪೇಂದ್ರ ಸೇರಿದಂತೆ 11 ಮಂದಿ ಮೇಲೆ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ವೈರಲ್ ಆದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಗಳ ನಡುವೆ ವ್ಯತ್ಯಾಸ ಇರುವುದರಿಂದ ಪ್ರಕರಣ ಈಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
“ಇಬ್ಬರೂ ಈಗಾಗಲೇ ಒಟ್ಟಿಗೆ ಬದುಕುತ್ತಿದ್ದಾಗ, ಮಧ್ಯರಾತ್ರಿ ಶಸ್ತ್ರಾಸ್ತ್ರಗಳೊಂದಿಗೆ ಹೋಗುವ ಅವಶ್ಯಕತೆ ಏನು?” ಎಂಬ ಪ್ರಶ್ನೆ ಇದೀಗ ಪೊಲೀಸರ ತನಿಖೆಯ ಕೇಂದ್ರಬಿಂದುವಾಗಿದೆ. ಇದು ನಿಜವಾದ ಕಿಡ್ನಾಪ್‌ನಾ ಅಥವಾ ಪೂರ್ವನಿಯೋಜಿತ ನಾಟಕವೋ ಎಂಬುದರ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.



