ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭಕ್ತರ ದಂಡು, 9 ದಿನದಲ್ಲಿ 41 ಕೋಟಿ ಆದಾಯ
ಶಬರಿಮಲೆ ಅಯ್ಯಪ್ಪ ದೇಗುಲ, ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದೆ, ಸ್ವಾಮಿಯ ದರ್ಶನಕ್ಕೆ ಸುಮಾರು 10 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ.
ಶಬರಿಮಲೆ ಅಯ್ಯಪ್ಪ ದೇಗುಲ (Sabarimala Ayyappa temple) ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಶಬರಿಮಲೆಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇದರೊಂದಿಗೆ ಶಬರಿಗಿರಿ ಅಯ್ಯಪ್ಪನ ನಾಮಸ್ಮರಣೆಯಲ್ಲಿ ಮುಳುಗಿದೆ.
ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸ್ವಾಮಿಯ ದರ್ಶನಕ್ಕೆ ಸುಮಾರು 10 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಅಯ್ಯಪ್ಪ ಭಕ್ತರು ಸನ್ನಿಧಾನದಿಂದ ಪಂಬಾವರೆಗೆ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ಶಬರಿಮಲೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 16 ರಂದು ದೇವಾಲಯ ತೆರೆದಾಗ, ಈ ಒಂಬತ್ತು ದಿನಗಳಲ್ಲಿ 6,12,290 ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಇದೇ ಋತುವಿನಲ್ಲಿ 3,03,501 ಮಂದಿ ಮಾತ್ರ ಸ್ವಾಮಿಯ ದರ್ಶನ ಪಡೆದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರ ಪೂರ್ವಭಾವಿ ಕ್ರಮಗಳಿಂದ ಪ್ರತಿ ನಿಮಿಷಕ್ಕೆ 80 ಭಕ್ತರು ಪವಿತ್ರ ಪಾಡಿ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ಭಕ್ತರ ಸಂಖ್ಯೆ ಹೆಚ್ಚಿದ್ದು, ಆದಾಯವೂ ಸಂಗ್ರಹವಾಗಿದೆ ಎಂದು ದೇವಸ್ತಾನ ಮಂಡಳಿ ಬಹಿರಂಗಪಡಿಸಿದೆ. ಕಳೆದ ವರ್ಷ ಇದೇ ವೇಳೆಗೆ 28.3 ಕೋಟಿ ರೂ.ಗಳಾಗಿದ್ದು, ಈ ಬಾರಿ 41.64 ಕೋಟಿ ರೂ. ಆಗಿದೆ, ಕಳೆದ ವರ್ಷಕ್ಕಿಂತ ರೂ.13.33 ಕೋಟಿ ಹೆಚ್ಚಿದೆ ಎಂಬ ಮಾಹಿತಿ ಸಿಕ್ಕಿದೆ.