ಚಿಲ್ಲರೆ ವಿಚಾರಕ್ಕೆ ಜಗಳ; ಚಲಿಸುವ ಬಸ್‌ನಿಂದ ತಳ್ಳಲ್ಪಟ್ಟ ಮಹಿಳಾ ಕಂಡಕ್ಟರ್ ಸಾವು

ಚಿಲ್ಲರೆ ಹಣದ ವಿಚಾರವಾಗಿ ಪ್ರಯಾಣಿಕ ಮಹಿಳೆಯೊಂದಿಗೆ ನಡೆದ ಗಲಾಟೆ ದುರಂತದಲ್ಲಿ ಅಂತ್ಯಗೊಂಡಿದೆ. ಬಸ್‌ನಿಂದ ಕೆಳಗೆ ಬಿದ್ದ ಕಂಡಕ್ಟರ್ ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿ ಕೊನೆಯುಸಿರೆಳೆದಿದ್ದು, ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.

ತೆಲಂಗಾಣದ (Telangana) ಖಮ್ಮಂ ಜಿಲ್ಲೆಯಲ್ಲಿ ಮಹಿಳಾ ಸಾರಿಗೆ ಸಿಬ್ಬಂದಿಯೊಬ್ಬರು ಕರ್ತವ್ಯ ನಿರ್ವಹಿಸುವಾಗಲೇ ಪ್ರಾಣ ಕಳೆದುಕೊಂಡಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮನುಗೂರು ಡಿಪೋದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಗುಂಡ್ಲ ಪ್ರವಳಿಕಾ ಮೃತಪಟ್ಟ ಮಹಿಳಾ ಕಂಡಕ್ಟರ್.

ಅಕ್ಟೋಬರ್ 25ರಂದು ಮನುಗೂರಿನಿಂದ ಭದ್ರಾಚಲಂ ಕಡೆಗೆ ತೆರಳುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (TGSRTC) ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಆಸ್ವಪುರಂ ಮಂಡಲದ ಮಿತ್ತಗೂಡೆಮ್ ಸಮೀಪ ಚಿಲ್ಲರೆ ಹಣ ಹಿಂದಿರುಗಿಸುವ ವಿಚಾರಕ್ಕೆ ಪ್ರಯಾಣಿಕ ಮಹಿಳೆ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ಪ್ರಯಾಣಿಕ ಮಹಿಳೆ ತನ್ನ ಮಗನೊಂದಿಗೆ ಬಸ್ ಹತ್ತಿ ₹10 ರೂಪಾಯಿ ಟಿಕೆಟ್‌ಗೆ ₹100 ರೂಪಾಯಿ ನೋಟು ನೀಡಿದ್ದರು. ಆದರೆ, ಪ್ರವಳಿಕಾ ಬಳಿ ತಕ್ಷಣಕ್ಕೆ ₹90 ರೂಪಾಯಿ ಚಿಲ್ಲರೆ ಇರಲಿಲ್ಲ. ಹೀಗಾಗಿ ಟಿಕೆಟ್ ಹಿಂಭಾಗದಲ್ಲಿ ಬಾಕಿ ಹಣವನ್ನು ಬರೆದುಕೊಟ್ಟು, ಇಳಿಯುವಾಗ ಪಡೆದುಕೊಳ್ಳುವಂತೆ ತಿಳಿಸಿದ್ದರು.

ಇದನ್ನೂ ಓದಿ: ತರಗತಿಯಲ್ಲೇ ಕುಸಿದು ಬಿದ್ದು 3ನೇ ತರಗತಿ ವಿದ್ಯಾರ್ಥಿನಿ ಸಾವು; ವೈರಲ್ ಸಿಸಿಟಿವಿ ದೃಶ್ಯ

ಆದರೆ, ಇಳಿಯುವ ಸ್ಥಳ ಸಮೀಪಿಸುತ್ತಿದ್ದಂತೆ ಪ್ರಯಾಣಿಕ ಮಹಿಳೆ ಹಣಕ್ಕಾಗಿ ಒತ್ತಾಯಿಸಿ ಜಗಳ ಆರಂಭಿಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಮಹಿಳೆ ಚಲಿಸುತ್ತಿದ್ದ ಬಸ್‌ನಿಂದ ಪ್ರವಳಿಕಾರನ್ನು ಕೆಳಕ್ಕೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಗೆ ಬಿದ್ದ ಅವರ ಕಾಲುಗಳ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗಳಾಗಿದ್ದವು.

ತಕ್ಷಣವೇ ಅವರನ್ನು ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸುಮಾರು ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆದರೂ ಪ್ರವಳಿಕಾ ಬದುಕುಳಿಯಲಿಲ್ಲ. ಮಂಗಳವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಸ್ವಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ

ಪ್ರವಳಿಕಾ ಸಾವಿಗೆ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ಅವರ ತಾಯಿಗೆ ಸರ್ಕಾರಿ ಉದ್ಯೋಗ ಹಾಗೂ ಇಂದಿರಮ್ಮ ಯೋಜನೆಯಡಿ ಮನೆ ನೀಡುವುದಾಗಿ ಘೋಷಿಸಿದ್ದಾರೆ. ಕರ್ತವ್ಯದಲ್ಲಿರುವ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತ ಮಹಿಳಾ ಕಂಡಕ್ಟರ್ ಸಾವಿನ ಸುದ್ದಿ ತಿಳಿದು ಸಾರಿಗೆ ನೌಕರರು ಆಕ್ರೋಶಗೊಂಡಿದ್ದಾರೆ. ಬುಧವಾರ ಖಮ್ಮಂ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಸಿಬ್ಬಂದಿ, ಬಸ್ ಸಂಚಾರ ಸ್ಥಗಿತಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories