ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧತೆ
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದ್ದು, ಬೆಂಗಳೂರಿನಲ್ಲಿ ನಿರ್ಮಾಣವಾದ ರೈಲು ಸೆಟ್‌ಗಳ ಪ್ರಾಯೋಗಿಕ ಸಂಚಾರ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.

ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಬೆಂಗಳೂರು, ಆಗಸ್ಟ್ 10: ಬೆಂಗಳೂರು-ಮುಂಬೈ ನಡುವೆ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕ್ಷಣಗಣನೆ ಶುರುವಾಗಿದೆ. ನೈಋತ್ಯ ರೈಲ್ವೆ ಎರಡು 16 ಬೋಗಿಗಳ ರೈಲು ಸೆಟ್‌ಗಳನ್ನು ನಿಯೋಜನೆ ಮಾಡಿದ್ದು, ಮುಂದಿನ ಹಂತದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಸಿದ್ಧತೆ ನಡೆಯುತ್ತಿದೆ.
ಈ ರೈಲುಗಳ ವಿಶೇಷತೆ ಎಂದರೆ, ಇವು ಬೆಂಗಳೂರಿನಲ್ಲೇ ಬಿಇಎಂಎಲ್ (BEML) ನಿರ್ಮಿಸಿರುವ ರೈಲು ಸೆಟ್‌ಗಳು. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ರೈಲುಗಳನ್ನು ತಯಾರಿಸಲಾಗಿದ್ದು, ಅಗತ್ಯ ಪರೀಕ್ಷೆ ಮತ್ತು ಪರಿಶೀಲನೆಗಳ ಬಳಿಕ ರೈಲ್ವೆ ಬಳಕೆಗೆ ನಿಯೋಜಿಸಲಾಗಿದೆ.
ಹಾಗಾದರೆ ಸೇವೆ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿದೆ. ಸದ್ಯ ಟ್ರಯಲ್ ರನ್‌ಗೆ ಸಿದ್ಧತೆ ನಡೆಯುತ್ತಿದ್ದು, ಪ್ರಾಯೋಗಿಕ ಸಂಚಾರದ ನಂತರ ಸಮಯ, ವೇಗ ಮತ್ತು ಮಾರ್ಗದ ಅಂತಿಮ ವಿವರಗಳನ್ನು ನಿರ್ಧರಿಸುವ ಸಾಧ್ಯತೆಯಿದೆ. ಬಳಿಕ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
16 ಗಂಟೆಯಲ್ಲಿ ಬೆಂಗಳೂರು-ಮುಂಬೈ?
ಹೊಸ ಸ್ಲೀಪರ್ ರೈಲು ರಾತ್ರಿ ಬೆಂಗಳೂರಿನಿಂದ ಹೊರಟು ಮುಂಬೈ ತಲುಪುವ ರೀತಿಯಲ್ಲಿ ಸೇವೆ ನೀಡುವ ಸಾಧ್ಯತೆಯಿದೆ. ಮುಂಬೈನಿಂದಲೂ ರಾತ್ರಿ ರೈಲು ಹೊರಡುವ ನಿರೀಕ್ಷೆಯಿದ್ದು, ಒಟ್ಟಾರೆ ಪ್ರಯಾಣದ ಅವಧಿ ಸುಮಾರು 16 ಗಂಟೆಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಬೆಂಗಳೂರು-ಮುಂಬೈ ನಡುವಿನ ಪ್ರಮುಖ ರೈಲುಗಳಿಗೆ ಸುಮಾರು 24 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಹೀಗಾಗಿ ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ, ಪ್ರಯಾಣದ ಸಮಯದಲ್ಲಿ ದೊಡ್ಡ ಮಟ್ಟದ ಉಳಿತಾಯವಾಗಬಹುದು.
ರೈಲು ಮಾರ್ಗದ ವಿಚಾರದಲ್ಲಿ KSR ಬೆಂಗಳೂರು-ಮುಂಬೈ CSMT ಮಾರ್ಗ ಪ್ರಮುಖ ಆಯ್ಕೆಯಾಗಿದೆ. ಅದೇ ಸಮಯದಲ್ಲಿ SMVT ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಅಂತಿಮ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಗೊಳ್ಳಲಿದೆ.
ರೈಲಿನಲ್ಲಿ ಏನೆಲ್ಲ ಸೌಲಭ್ಯ?
16 ಬೋಗಿಗಳ ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 11 ತ್ರೀ-ಟಯರ್ ಎಸಿ (3AC), ನಾಲ್ಕು 2AC ಹಾಗೂ ಒಂದು ಫಸ್ಟ್ ಕ್ಲಾಸ್ ಎಸಿ (1AC) ಕೋಚ್ ಇರಲಿದೆ. ಅಂದರೆ ಸಾಮಾನ್ಯ ಪ್ರಯಾಣಿಕರಿಂದ ಹಿಡಿದು ಹೆಚ್ಚು ಆರಾಮದಾಯಕ ಪ್ರಯಾಣ ಬಯಸುವವರಿಗೂ ವಿವಿಧ ವರ್ಗದ ಆಯ್ಕೆ ಸಿಗಲಿದೆ.
ಟಿಕೆಟ್ ದರದ ಬಗ್ಗೆ ಇನ್ನೂ ಅಂತಿಮ ಘೋಷಣೆ ಆಗಿಲ್ಲ. ಆದರೆ 3AC ಟಿಕೆಟ್ ಊಟ ಸೇರಿದಂತೆ ಸುಮಾರು 3,000 ರೂಪಾಯಿ ಇರಬಹುದು ಎಂಬ ನಿರೀಕ್ಷೆ ಇದೆ. ಟ್ರಯಲ್ ರನ್ ಮತ್ತು ಅಂತಿಮ ಕಾರ್ಯಾಚರಣಾ ಯೋಜನೆ ಪೂರ್ಣಗೊಂಡ ಬಳಿಕ ದರದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕಕ್ಕೂ ಲಾಭ
ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಮೂಲಕ ಸಂಚರಿಸುವ ನಿರೀಕ್ಷೆಯಿದ್ದು, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೂ ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ. ಸುಮಾರು 1,137 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಮತ್ತು ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಹಲವು ಕಡೆ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಓಡಿಸಲು ಅವಕಾಶವಿದೆ.
ಇನ್ನು ಬೆಂಗಳೂರು-ಮುಂಬೈ ರೈಲನ್ನು ಹುಬ್ಬಳ್ಳಿ ಮಾರ್ಗವಾಗಿ ಓಡಿಸಬೇಕು ಎಂಬ ಬೇಡಿಕೆಯೂ ಈ ಹಿಂದೆ ಕೇಳಿಬಂದಿತ್ತು. ಆದರೆ ಆ ಮಾರ್ಗದ ಉದ್ದ, ಕೆಲವು ಕಡೆ ಸಿಂಗಲ್ ಟ್ರ್ಯಾಕ್ ಹಾಗೂ ವೇಗದ ಮಿತಿಗಳಂತಹ ಕಾರಣಗಳಿಂದಾಗಿ ಸದ್ಯ ಆ ಆಯ್ಕೆಗೆ ಆದ್ಯತೆ ನೀಡಲಾಗಿಲ್ಲ.
ಒಟ್ಟಿನಲ್ಲಿ, ಟ್ರಯಲ್ ರನ್ ಯಶಸ್ವಿಯಾಗಿ ಪೂರ್ಣಗೊಂಡು ಅಂತಿಮ ಅನುಮತಿಗಳು ಸಿಕ್ಕರೆ ಬೆಂಗಳೂರು-ಮುಂಬೈ ನಡುವೆ ರಾತ್ರಿ ಪ್ರಯಾಣಕ್ಕೆ ಹೊಸ ಆಯ್ಕೆ ಸಿಗಲಿದೆ. ಅದರಲ್ಲೂ ಸುಮಾರು 24 ಗಂಟೆ ತೆಗೆದುಕೊಳ್ಳುವ ಹಾಲಿ ರೈಲುಗಳಿಗೆ ಹೋಲಿಸಿದರೆ, 16 ಗಂಟೆಯೊಳಗಿನ ಪ್ರಯಾಣದ ನಿರೀಕ್ಷೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಬಹುದು.



