ಚಿಕನ್‌ ಪೀಸ್‌ ವಿಚಾರಕ್ಕೆ ಎದೆಗೆ ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಚಿಕನ್‌ ಪೀಸ್‌ ಹಂಚಿಕೆ ವಿಚಾರಕ್ಕೆ ನಡೆದ ಜಗಳ ಚಾಕು ಇರಿತಕ್ಕೆ ತಿರುಗಿ, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬೆಳಗಾವಿ (Belagavi): ಸ್ನೇಹಿತರೊಂದಿಗೆ ಸೇರಿ ಮಾಡುತ್ತಿದ್ದ ಚಿಕನ್‌ ಪಾರ್ಟಿಯಲ್ಲಿ ಆರಂಭವಾದ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ. ಚಿಕನ್‌ ಪೀಸ್‌ ವಿಚಾರಕ್ಕೆ ಸಹೋದ್ಯೋಗಿಗಳ ನಡುವೆ ನಡೆದ ಗಲಾಟೆ ಬಳಿಕ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೃತರನ್ನು ಸೀತಾರಾಮ್ ಎಂದು ಗುರುತಿಸಲಾಗಿದ್ದು, ಆರೋಪಿ ಅರುಣ್‌ಕುಮಾರ್ ಎಂದು ತಿಳಿದುಬಂದಿದೆ. ಇಬ್ಬರೂ ಉತ್ತರ ಪ್ರದೇಶದ ಪಿಲಿಭೀತ್ ಜಿಲ್ಲೆಯ ಕಬೀರಗಂಜ್ ಗ್ರಾಮದ ನಿವಾಸಿಗಳಾಗಿದ್ದು, ಮೂಡಲಗಿ ಪಟ್ಟಣದ ಸ್ಟೀಲ್ ಕಂಪನಿಯೊಂದರಲ್ಲಿ (Steel Company) ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಆಗಸ್ಟ್‌ 30ರ ರಾತ್ರಿ ಇಬ್ಬರೂ ಸೇರಿದಂತೆ ಕೆಲವರು ಚಿಕನ್‌ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ತನಗೆ ಹೆಚ್ಚು ಚಿಕನ್‌ ಪೀಸ್‌ ಬೇಕು ಎಂಬ ವಿಚಾರಕ್ಕೆ ಸೀತಾರಾಮ್‌ ಮತ್ತು ಅರುಣ್‌ಕುಮಾರ್ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಗಲಾಟೆ ತೀವ್ರಗೊಂಡಿದ್ದು, ಅರುಣ್‌ಕುಮಾರ್ ಚಾಕುವಿನಿಂದ ಸೀತಾರಾಮ್‌ ಅವರ ಎದೆಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಸೀತಾರಾಮ್‌ ಅವರನ್ನು ಕೂಡಲೇ ಗೋಕಾಕ್‌ ಸರ್ಕಾರಿ ಆಸ್ಪತ್ರೆಗೆ (Gokak Government Hospital) ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇತ್ತ ಘಟನೆ ಬಳಿಕ ಸೀತಾರಾಮ್ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದಾರೆ ಎಂಬಂತೆ ಘಟನೆಗೆ ಬೇರೆ ರೀತಿಯ ಚಿತ್ರಣ ನೀಡಲು ಆರೋಪಿ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ಮಾಹಿತಿ ಪಡೆದ ಘಟಪ್ರಭಾ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ವಿಚಾರಣೆ ಆರಂಭಿಸಿದರು.

ಪೊಲೀಸರು ಅರುಣ್‌ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ (Police Investigation) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಾಮಾನ್ಯವಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ನಡುವಿನ ಕ್ಷುಲ್ಲಕ ವಿಚಾರ ಕ್ಷಣಾರ್ಧದಲ್ಲಿ ಹಿಂಸಾತ್ಮಕ ಘಟನೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories