Bengaluru Chicken: ಬೆಂಗಳೂರು ಸೇರಿ ಕರ್ನಾಟಕ ಚಿಕನ್ ಬೆಲೆ ಗಗನಕ್ಕೆ! ಕೆಜಿಗೆ ₹100 ರೂಪಾಯಿ ಏರಿಕೆ

ತಮಿಳುನಾಡಿನ ಕೋಳಿ ಸಾಕಣೆದಾರರ ಮುಷ್ಕರ ಪರಿಣಾಮ ಬೆಂಗಳೂರಿಗೆ ಕೋಳಿ ಪೂರೈಕೆ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ ನೂರು ರೂಪಾಯಿಗೂ ಹೆಚ್ಚು ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿ ತಟ್ಟಿದೆ.

  • ಕೋಳಿ ಮಾಂಸದ ಬೆಲೆ ಏರಿಕೆ, ಕೆಜಿಗೆ ₹100ಕ್ಕೂ ಹೆಚ್ಚು ಹೆಚ್ಚಳ
  • ತಮಿಳುನಾಡು ಮುಷ್ಕರದಿಂದ ಕೋಳಿ ಪೂರೈಕೆ ಸ್ಥಗಿತ
  • ಬೆಂಗಳೂರು ಸೇರಿ ಕರ್ನಾಟಕದಲ್ಲಿ ಚಿಕನ್ ಬೆಲೆ ಗಗನಕ್ಕೆ

ಬೆಂಗಳೂರು (Bengaluru): ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಳಿ ಮಾಂಸದ ಬೆಲೆ (Karnataka Chicken Price Hike) ಏಕಾಏಕಿ ಗಗನಕ್ಕೇರಿದ್ದು, ಸಾಮಾನ್ಯ ಗ್ರಾಹಕರ ಜೇಬಿಗೆ ನೇರ ಹೊಡೆತ ಬಿದ್ದಿದೆ. ತಮಿಳುನಾಡಿನ ಕೋಳಿ ಸಾಕಣೆದಾರರು (Chicken Farming) ನಡೆಸುತ್ತಿರುವ ಮುಷ್ಕರವೇ ಈ ದಿಢೀರ್ ಬೆಲೆ ಏರಿಕೆಯ ಪ್ರಮುಖ ಕಾರಣವಾಗಿದೆ.

ಜನವರಿ 1ರಿಂದ ತಮಿಳುನಾಡಿನ ಪಲ್ಲಡಂ, ಈರೋಡ್, ತಿರುಪ್ಪೂರ್ ಮತ್ತು ಕೊಯಮತ್ತೂರು ಭಾಗದ ಕೋಳಿ ಸಾಕಣೆದಾರರು ಉತ್ಪಾದನೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಖಾಸಗಿ ಬ್ರಾಯ್ಲರ್ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರವೇ ಈ ಹೋರಾಟಕ್ಕೆ ಕಾರಣ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿಗೆ ಬಿದ್ದ ಟೆಕ್ಕಿ; ಭುಜದ ಮೂಳೆ ಮುರಿದು ಗಂಭೀರ ಗಾಯ

ರೈತರ ಅಸಮಾಧಾನ ಏಕೆ?

ರೈತರ ಪ್ರಕಾರ, ಕಳೆದ ಹಲವು ವರ್ಷಗಳಿಂದ ಪ್ರತಿ ಕೆಜಿ ಬ್ರಾಯ್ಲರ್ ಕೋಳಿಗೆ ಕೇವಲ 6.5 ರೂಪಾಯಿ ಸಾಕಾಣಿಕೆ ದರವೇ ಸಿಗುತ್ತಿದೆ. ಇದೇ ಅವಧಿಯಲ್ಲಿ ವಿದ್ಯುತ್, ಕಾರ್ಮಿಕರು, ಫಾರಂ ನಿರ್ವಹಣೆ ಸೇರಿದಂತೆ ಎಲ್ಲ ವೆಚ್ಚಗಳು ಹೆಚ್ಚಾಗಿವೆ. ತೆಂಗಿನ ನಾರು ಸೇರಿದಂತೆ ಮೂಲಸಾಮಗ್ರಿಗಳ ಬೆಲೆ ಭಾರೀ ಏರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹೀಗಾಗಿ ಬ್ರಾಯ್ಲರ್ ಕೋಳಿಗೆ ಕೆಜಿಗೆ 20 ರೂಪಾಯಿ, ನಾಟಿ ಕೋಳಿಗೆ 25 ರೂಪಾಯಿ ಹಾಗೂ ಇತರೆ ಸಾಕಾಣಿಕೆ ದರ ಪರಿಷ್ಕರಣೆ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ ಎಫ್‌ಸಿಆರ್ ವ್ಯವಸ್ಥೆ ರದ್ದು ಮತ್ತು ಕಲ್ಯಾಣ ಮಂಡಳಿ ರಚನೆಯೂ ಅವರ ಒತ್ತಾಯವಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಮುಗಿಯದ ವೈಟ್‌ಟಾಪಿಂಗ್; ಸಂಚಾರ ದಟ್ಟಣೆಗೆ ನಲುಗಿದ ನಗರ

ಬೆಂಗಳೂರಿನಲ್ಲಿ ಏರಿದ ಚಿಕನ್ ದರ

ಸಾಮಾನ್ಯವಾಗಿ ಬೆಂಗಳೂರಿಗೆ ತಮಿಳುನಾಡಿನ ನಾಮಕ್ಕಲ್ ಹಾಗೂ ಪಲ್ಲಡಂ ಭಾಗಗಳಿಂದ ಹೆಚ್ಚಿನ ಪ್ರಮಾಣದ ಕೋಳಿ ಮಾಂಸ ಪೂರೈಕೆ ಆಗುತ್ತದೆ. ಆದರೆ ಮುಷ್ಕರದಿಂದಾಗಿ ಈ ಸರಬರಾಜು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಡಿಸೆಂಬರ್ ತಿಂಗಳಲ್ಲಿ 200–240 ರೂಪಾಯಿ ಇದ್ದ ಚಿಕನ್ ಬೆಲೆ ಇದೀಗ 300 ರಿಂದ 320 ರೂಪಾಯಿಗೆ ಏರಿಕೆಯಾಗಿದೆ.

ಮುಷ್ಕರ ಮುಂದುವರಿದರೆ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಾಪಾರ ವಲಯದಲ್ಲಿದೆ. ಹೋಟೆಲ್ ಉದ್ಯಮ ಮತ್ತು ಸಣ್ಣ ವ್ಯಾಪಾರಿಗಳ ಮೇಲೂ ಇದರ ಪರಿಣಾಮ ಗೋಚರಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಮೂವರು ವಿದ್ಯಾರ್ಥಿಗಳು ಸಾವು

ಸರ್ಕಾರದ ಮಧ್ಯಸ್ಥಿಕೆ, ಸಭೆ ನಿರ್ಣಾಯಕ

ಮುಷ್ಕರದ ವೇಳೆ ಕಂಪನಿಗಳ ವಾಹನ ತಡೆದ ಆರೋಪದ ಮೇಲೆ ಕೆಲವು ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ತಮಿಳುನಾಡು ಸರ್ಕಾರದ ಪಶುಸಂಗೋಪನಾ ಇಲಾಖೆ ಮಧ್ಯಪ್ರವೇಶ ಮಾಡಿದ್ದು, ಜನವರಿ 21ರಂದು ತ್ರಿಪಕ್ಷೀಯ ಸಭೆ ನಿಗದಿಯಾಗಿದೆ.

ಈ ಸಭೆಯಲ್ಲಿ ಪರಿಹಾರ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅಷ್ಟರವರೆಗೆ ಕರ್ನಾಟಕದಲ್ಲಿ ಕೋಳಿ ಕೊರತೆ ಮತ್ತು ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories