ಯುವಕನ ಅನುಮಾನಾಸ್ಪದ ಸಾವು! ಹೊಟ್ಟೆಯೊಳಗೆ ಬ್ಯಾಟರಿ, ಲೈಟರ್, ಕೀ, ಹೇರ್‌ಪಿನ್ ಪತ್ತೆ

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ 28 ವರ್ಷದ ಯುವಕನ ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯೊಳಗೆ ಬ್ಯಾಟರಿ, ಲೈಟರ್, ಕೀ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ಚಿಕ್ಕಬಳ್ಳಾಪುರ (Chikkaballapur), ಆಗಸ್ಟ್ 31: ಗುಡಿಬಂಡೆ ಪಟ್ಟಣದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮರಣೋತ್ತರ ಪರೀಕ್ಷೆ (Postmortem) ನಡೆಸಿದ ವೇಳೆ ಮೃತನ ಹೊಟ್ಟೆಯೊಳಗೆ ಹಲವು ಲೋಹದ ಹಾಗೂ ಇತರ ವಸ್ತುಗಳು ಪತ್ತೆಯಾಗಿದ್ದು, ವೈದ್ಯರು ಕೂಡ ಅಚ್ಚರಿಗೊಳಗಾಗಿದ್ದಾರೆ.

ಗುಡಿಬಂಡೆ ಪಟ್ಟಣದ ಬಾಪೂಜಿನಗರದಲ್ಲಿ 28 ವರ್ಷದ ಮಹೇಶ್ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದವರಾದ ಅವರು, ಕೆಲವು ದಿನಗಳಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಮನೆಯವರು ಇಲ್ಲದ ಸಮಯದಲ್ಲಿ ಮಹೇಶ್ ನೇಣು ಬಿಗಿದುಕೊಂಡಿದ್ದರು ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಪೊಲೀಸರಿಗೆ ಅನುಮಾನ ಮೂಡಿಸಿದೆ. ಹೀಗಾಗಿ ಇದು ಆತ್ಮಹತ್ಯೆಯೇ ಅಥವಾ ಸಾವಿನ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ತಿಳಿಯಲು ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಹೊಟ್ಟೆಯೊಳಗೆ ಸಿಕ್ಕಿದ್ದೇನು?

ಮರಣೋತ್ತರ ಪರೀಕ್ಷೆ ವೇಳೆ ವೈದ್ಯರು ಮೃತನ ಹೊಟ್ಟೆಯೊಳಗೆ ಬ್ಯಾಟರಿ ಸೆಲ್, ಲೈಟರ್, ಬೀಗದ ಕೀಗಳು, ಹೇರ್‌ಪಿನ್, ಔಷಧಿ ಟ್ಯೂಬ್‌ಗಳು ಹಾಗೂ ಕಬ್ಬಿಣದ ಚೂರುಗಳು ಸೇರಿದಂತೆ ಹಲವು ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಬಳಿಕ ಅವುಗಳನ್ನು ಹೊರತೆಗೆಯಲಾಗಿದೆ.

ಇಷ್ಟೊಂದು ವಸ್ತುಗಳು ಹೊಟ್ಟೆಯೊಳಗೆ ಹೇಗೆ ಸೇರಿಕೊಂಡವು ಎಂಬುದು ಇದೀಗ ಪ್ರಕರಣದ ಪ್ರಮುಖ ಪ್ರಶ್ನೆಯಾಗಿದೆ. ಮಹೇಶ್ ಇವುಗಳನ್ನು ಯಾವಾಗ ಅಥವಾ ಹೇಗೆ ನುಂಗಿದ್ದರು ಎಂಬುದು ಕುಟುಂಬಸ್ಥರಿಗೂ ತಿಳಿದಿಲ್ಲ ಎನ್ನಲಾಗಿದೆ. ತಮ್ಮ ಎದುರು ಅವರು ಯಾವುದೇ ವಸ್ತುಗಳನ್ನು ನುಂಗಿರುವುದನ್ನು ನೋಡಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಮತ್ತೊಂದೆಡೆ, ಮಹೇಶ್ ಅವರಿಗೆ ಸಾಲದ ಸಮಸ್ಯೆ ಇತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಆದರೆ ಸದ್ಯ ಪತ್ತೆಯಾಗಿರುವ ವಸ್ತುಗಳು ಮತ್ತು ಸಾವಿನ ಸಂದರ್ಭ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ (Police Investigation) ತನಿಖೆ ನಡೆಸುತ್ತಿದ್ದಾರೆ. ಯುವಕನ ಸಾವಿಗೆ ನಿಖರ ಕಾರಣವೇನು ಮತ್ತು ಹೊಟ್ಟೆಯೊಳಗೆ ವಸ್ತುಗಳು ಹೇಗೆ ಸೇರಿಕೊಂಡವು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories