ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಕೊಲೆ! ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ
ಚಿಕ್ಕೋಡಿಯಲ್ಲಿ ಪ್ರೀತಿಯನ್ನು ನಿರಾಕರಿಸಿದ 16 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.

- ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ
- ಚಿಕ್ಕೋಡಿ ನ್ಯಾಯಾಲಯದಿಂದ ಮಹತ್ವದ ತೀರ್ಪು
- ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪ ಸಾಬೀತು
ಚಿಕ್ಕೋಡಿ: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಚಿಕ್ಕೋಡಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮೀರ್ ಲಾಲ್ಸಾಬ್ ಜಮಾದಾರ್ (26) ಎಂಬಾತನಿಗೆ ಜೀವಾವಧಿ ಶಿಕ್ಷೆ (Life Imprisonment) ಹಾಗೂ ₹30 ಸಾವಿರ ದಂಡ ವಿಧಿಸಲಾಗಿದೆ.
ಅಥಣಿ ತಾಲೂಕಿನ ನಾಗನೂರು ಪಿ.ಕೆ. ಗ್ರಾಮದ ಮೂಲದ ಹಾಗೂ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ವಾಸವಾಗಿದ್ದ ಕುಟುಂಬದ 16 ವರ್ಷದ ಲಕ್ಷ್ಮಿ ಶೇಖರ್ ರುದ್ರನವರ ಮೃತ ಬಾಲಕಿ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
2021ರ ಆಗಸ್ಟ್ 1ರಂದು ಹಾರೂಗೇರಿ ಸಮೀಪದ ಕರಿಸಿದ್ದೇಶ್ವರ ದೇವರ ಜಾತ್ರೆಗೆ ಲಕ್ಷ್ಮಿ ತನ್ನ ತಂಗಿಯರು ಹಾಗೂ ಗೆಳತಿಯರೊಂದಿಗೆ ತೆರಳಿದ್ದಳು. ಇದೇ ವೇಳೆ ಜಾತ್ರೆಗೆ ಬಂದಿದ್ದ ಅಮೀರ್, ಬಾಲಕಿಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಾಳೆ.
ಬಾಲಕಿ ತನ್ನ ಪ್ರಸ್ತಾಪವನ್ನು ಒಪ್ಪದಿದ್ದರಿಂದ ಕೋಪಗೊಂಡ ಆರೋಪಿ ಮೊಬೈಲ್ ಫೋನ್ ಅನ್ನು ನೆಲಕ್ಕೆ ಬಡಿದು ಅಲ್ಲಿಂದ ತೆರಳಿದ್ದ. ಆದರೆ ನಂತರವೂ ಆಕೆಯನ್ನು ಹಿಂಬಾಲಿಸಿದ್ದಾನೆ. ಮನೆಗೆ ಕಾಲ್ನಡಿಗೆಯಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಮತ್ತೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.
ಬಾಲಕಿ ಮತ್ತೊಮ್ಮೆ ನಿರಾಕರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆರೋಪಿ ಸಣ್ಣ ಕತ್ತಿಯಿಂದ ಆಕೆಯ ಮೇಲೆ ದಾಳಿ (Attack) ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕಿ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಪೊಲೀಸರ ಭಯದಿಂದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.
ಮಾಹಿತಿ ದೊರೆತ ಕೂಡಲೇ ಹಾರೂಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಪಿಎಸ್‌ಐ ರಾಘವೇಂದ್ರ ಖೋತ್ ಹಾಗೂ ಸಿಪಿಐ ಕೆ.ಎಸ್. ಹಟ್ಟಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ವಿಚಾರಣೆಯಲ್ಲಿ ಮೃತ ಬಾಲಕಿಯ ತಂಗಿಯರು ಹಾಗೂ ಗೆಳತಿಯರು ನೀಡಿದ ಹೇಳಿಕೆಗಳು ಪ್ರಮುಖ ಸಾಕ್ಷ್ಯಗಳಾಗಿದ್ದವು. ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಅಮೀರ್ ಲಾಲ್ಸಾಬ್ ಜಮಾದಾರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ. ತೀರ್ಪಿನ ಬಳಿಕ ಆರೋಪಿಯನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಮಾತನಾಡಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿದ್ದರು. 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯದ ತೀರ್ಪಿನಿಂದ ಬಾಲಕಿಗೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದ್ದಾರೆ.
ಮಗಳ ಸಾವಿನ ನೋವು ಇಂದಿಗೂ ಮರೆಯಾಗಿಲ್ಲ ಎಂದು ಬಾಲಕಿಯ ತಂದೆ ಶೇಖರ್ ರುದ್ರನವರ ಹೇಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಮಗಳ ಕೊಲೆ ದೊಡ್ಡ ಆಘಾತವಾಗಿತ್ತು. ಆಕೆಯನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳಿಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ನ್ಯಾಯಾಲಯದ ತೀರ್ಪಿನಿಂದ ನ್ಯಾಯ ದೊರೆತಿದ್ದರೂ, ಮಗಳು ಮತ್ತೆ ತಮ್ಮ ಬಳಿ ಬರುವುದಿಲ್ಲ ಎಂಬ ನೋವು ಸದಾ ಉಳಿಯಲಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.



