ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ವೈರಲ್! 80s ಫೋಟೋ ಟ್ರೆಂಡ್ ತಂದ ಪಜೀತಿ
80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ ಇನ್ಸ್ಟಾಲ್ ಮಾಡಿದ ಬೆಂಗಳೂರಿನ ವ್ಯಕ್ತಿಯ ಮೊಬೈಲ್ ಹ್ಯಾಕ್ ಮಾಡಿ ವಂಚಕರು ಹಣಕ್ಕೆ ಬೇಡಿಕೆ ಇಟ್ಟು ಬೆದರಿಸಿದ್ದಾರೆ.

ನೆಲಮಂಗಲ, ಸೆಪ್ಟೆಂಬರ್ 18: ಸಾಮಾಜಿಕ ಜಾಲತಾಣಗಳಲ್ಲಿ (Social Media) ಇತ್ತೀಚೆಗೆ ಗಮನ ಸೆಳೆಯುತ್ತಿರುವ 80ರ ದಶಕದ ಹಳೆಯ ಶೈಲಿಯ ಫೋಟೋ ಎಡಿಟಿಂಗ್ ಟ್ರೆಂಡ್ ಇದೀಗ ಸೈಬರ್ ವಂಚಕರಿಗೆ ಹೊಸ ಅಸ್ತ್ರವಾಗಿರುವ ಆರೋಪ ಕೇಳಿಬಂದಿದೆ. ಈ ರೀತಿಯ ಫೋಟೋ ಮಾಡಲು ಹೋಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ನಕಲಿ ಆ್ಯಪ್ನಿಂದ ವಂಚನೆಗೆ ಒಳಗಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ ವಿನೋದ್ (45) ವಂಚನೆಗೊಳಗಾದ ವ್ಯಕ್ತಿ. ಮೂರು ದಿನಗಳ ಹಿಂದೆ ತಮ್ಮ ಫೋಟೋವನ್ನು 80ರ ದಶಕದ ಶೈಲಿಗೆ ಬದಲಾಯಿಸಲು ಆ್ಯಪ್ಗಾಗಿ ಹುಡುಕಾಟ ನಡೆಸಿದ್ದ ಅವರು, ಚಾಟ್ಜಿಪಿಟಿ ಮಾದರಿಯ ತಂತ್ರಜ್ಞಾನ ಬಳಸುವಂತೆ ಕಂಡುಬಂದ ನಕಲಿ ಆ್ಯಪ್ವೊಂದನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದರು.
ಆ್ಯಪ್ ಇನ್ಸ್ಟಾಲ್ ಮಾಡಿದ ಕೆಲವೇ ಸಮಯದಲ್ಲಿ ವಿನೋದ್ ಅವರ ಮೊಬೈಲ್ ಹಾಗೂ ಖಾತೆಗಳ ಮೇಲೆ ಸೈಬರ್ ವಂಚಕರು (Cyber Fraudsters) ಕನ್ನ ಹಾಕಿದ್ದಾರೆ ಎನ್ನಲಾಗಿದೆ. ಮೊಬೈಲ್ ಹ್ಯಾಕ್ (Mobile Hack) ಆದ ಸುಮಾರು ಐದು ನಿಮಿಷಗಳಲ್ಲೇ ಅಪರಿಚಿತ ವ್ಯಕ್ತಿಯೊಬ್ಬರು ಅವರಿಗೆ ಕರೆ ಮಾಡಿ ₹50 ಸಾವಿರ ನೀಡುವಂತೆ ಒತ್ತಾಯಿಸಿದ್ದಾರೆ.
ಹಣ ನೀಡಲು ವಿನೋದ್ ನಿರಾಕರಿಸಿದಾಗ, ಅವರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ. ವಿನೋದ್ ಇದಕ್ಕೆ ಹೆದರದೆ ಕರೆ ಕಡಿತಗೊಳಿಸಿದ್ದಾರೆ ಎನ್ನಲಾಗಿದೆ.
ಆದರೆ ಕರೆ ಕಡಿತಗೊಳಿಸಿದ ಕೆಲವೇ ನಿಮಿಷಗಳಲ್ಲಿ ವಂಚಕರು ವಿನೋದ್ ಅವರ ಫೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ, ಅವರ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳಿಗೆ (WhatsApp Groups) ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ವಿನೋದ್ ಕೂಡಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ (Cyber Crime Police) ತೆರಳಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಫೋಟೋ ಎಡಿಟಿಂಗ್ ಹಾಗೂ ಇತರ ಸೇವೆಗಳ ಹೆಸರಿನಲ್ಲಿ ಅಪರಿಚಿತ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅಧಿಕೃತ ಮೂಲಗಳಿಂದ ಮಾತ್ರ ಆ್ಯಪ್ಗಳನ್ನು ಡೌನ್ಲೋಡ್ ಮಾಡುವುದು ಮತ್ತು ಅನುಮಾನಾಸ್ಪದ ಅನುಮತಿಗಳನ್ನು ನೀಡದಿರುವುದು ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಬಹುದು.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



