4 ವರ್ಷದ ಮಗನ ಹತ್ಯೆ ಮಾಡಿದ ತಂದೆ ಬಂಧನ! ಜಲಾಶಯಕ್ಕೆ ಎಸೆದು ಕಂದಮ್ಮನ ಕೊಲೆ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೋಳ ಗ್ರಾಮದ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗನನ್ನು ಜಲಾಶಯಕ್ಕೆ ಎಸೆದು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ತಂದೆಯೇ ತನ್ನ ನಾಲ್ಕು ವರ್ಷದ ಮಗನನ್ನು ಜಲಾಶಯಕ್ಕೆ ಎಸೆದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ನಡೆದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಹತ್ಯೆಯಾದ ಬಾಲಕನನ್ನು ಗುಂಡೇಶ ಎಂದು ಗುರುತಿಸಲಾಗಿದೆ. ಆತ ಹಸರಗುಂಡಗಿ ಗ್ರಾಮದ ಕಲ್ಪನಾ ಹಾಗೂ ಸೋಮರಾವ್ ಹೂಗಾರ ದಂಪತಿಯ ಪುತ್ರ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾಲಕನ ತಾಯಿ ಕಲ್ಪನಾ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು ಎಂದು ತಿಳಿದುಬಂದಿದೆ.

ಪತ್ನಿಯೊಂದಿಗೆ ಮನಸ್ತಾಪವಿದ್ದರೂ ಆ.23ರಂದು ಸೋಮರಾವ್ ಪತ್ನಿಯ ಮನೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಮಗನೊಂದಿಗೆ ಕೆಲಕಾಲ ಆಟವಾಡಿದ್ದಾನೆ. ಬಳಿಕ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ನಾಗರಾಳ ಜಲಾಶಯಕ್ಕೆ (Reservoir) ತೆರಳಿದ ಸೋಮರಾವ್, ಮಗನನ್ನು ನೀರಿಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಬಾಲಕನಿಗಾಗಿ ಹುಡುಕಾಟ ನಡೆಸಲಾಗಿದ್ದು, ಕೊನೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ.

ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ ಕಲ್ಪನಾ ತವರು ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದ್ದು, ಇದರಿಂದ ದಂಪತಿ ನಡುವೆ ಕೌಟುಂಬಿಕ ವಿರಸ (Family Dispute) ಉಂಟಾಗಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಗುವಿನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತ ತಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂಚೋಳಿ ಠಾಣೆ ಪೊಲೀಸರು (Chincholi Police) ಆರೋಪಿ ಸೋಮರಾವ್‌ನನ್ನು ಬಂಧಿಸಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories