ಗೃಹಲಕ್ಷ್ಮೀ ಹಣ ಪಡೆಯುವವರಿಗೆ ಹೊಸ ರೂಲ್ಸ್: ಆ.30ರಿಂದ ಮನೆಮನೆ ಸರ್ವೇ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಅರ್ಹತೆ ಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ; ಆಗಸ್ಟ್ 30ರಿಂದ ಮನೆಮನೆ ಸಮೀಕ್ಷೆ, ಬಯೋಮೆಟ್ರಿಕ್ ಹಾಗೂ ಮುಖಚಹರೆ ದೃಢೀಕರಣ ಪ್ರಕ್ರಿಯೆ ನಡೆಯಲಿದೆ.

ಬೆಂಗಳೂರು (Bengaluru): ರಾಜ್ಯದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojane) ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಅರ್ಹರಿಗೆ ಮಾತ್ರ ಯೋಜನೆಯ ಪ್ರಯೋಜನ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಮರುಪರಿಶೀಲನೆ (Reverification) ಕೈಗೊಳ್ಳಲಾಗುತ್ತಿದೆ.
ಆಗಸ್ಟ್ 30ರಿಂದ ಒಂದು ತಿಂಗಳ ಅವಧಿಯಲ್ಲಿ ಕ್ಷೇತ್ರ ಪರಿಶೀಲನಾ ಕಾರ್ಯ ಪೂರ್ಣಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಇದಕ್ಕಾಗಿ ಮಾದರಿ ನಮೂನೆಗಳನ್ನು ಸಿದ್ಧಪಡಿಸಿ, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಗಣತಿದಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಈ ಪರಿಶೀಲನೆಯಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ (Biometric) ಹಾಗೂ ಮುಖಚಹರೆ ದೃಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ಈ ಪ್ರಕ್ರಿಯೆ ನಡೆಯಲಿದೆ.
ಅಧಿಕಾರಿಗಳು ಮತ್ತು ಗ್ಯಾರಂಟಿ ಸಮಿತಿ ಸದಸ್ಯರು ಫಲಾನುಭವಿಗಳ ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಫಲಾನುಭವಿ ಅಥವಾ ಅವರ ಕುಟುಂಬದ ಸದಸ್ಯರು ನೀಡಲಾಗುವ ನಮೂನೆಯನ್ನು ಭರ್ತಿ ಮಾಡಿ ಹಿಂದಿರುಗಿಸಬೇಕು. ಯಾವುದೇ ಕಾರಣಕ್ಕೂ ಮನೆ ಭೇಟಿ ತಪ್ಪಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮನೆಗೆ ಭೇಟಿ ನೀಡಿದ ವೇಳೆ ಗಣತಿದಾರರು ಮೊಬೈಲ್ ಆ್ಯಪ್ನಲ್ಲಿ ಫಲಾನುಭವಿಯ ಭಾವಚಿತ್ರ ಅಥವಾ ಮನೆಯ ಫೋಟೊ ದಾಖಲಿಸುವುದರ ಜತೆಗೆ ಜಿಪಿಎಸ್ ಮ್ಯಾಪಿಂಗ್ (GPS Mapping) ಮಾಡಬೇಕು. ಸ್ಥಳದಲ್ಲೇ ಮುಖ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನೂ ದಾಖಲಿಸಬೇಕಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲು ಪ್ರತ್ಯೇಕ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ನೇಮಿಸಲು ಸೂಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರ್ಡ್ ಹಾಗೂ ಗ್ರಾಮವಾರು ಗಣತಿದಾರರನ್ನು ನಿಯೋಜಿಸಿ ಲಿಖಿತ ಆದೇಶ ನೀಡಬೇಕು. ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಗ್ಯಾರಂಟಿ ಸಮಿತಿಗಳು ನಿಗದಿತ ಅವಧಿಯೊಳಗೆ ಪರಿಶೀಲನಾ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಸಹಕಾರದ ಜೊತೆಗೆ ಮನೆಮನೆ ಸಮೀಕ್ಷೆಯ ಮೂಲಕವೂ ಈ ಪರಿಶೀಲನಾ ಅಭಿಯಾನ (Verification Drive) ನಡೆಯಲಿದೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮುಂದಿನ ದಿನಗಳಲ್ಲಿ ತಮ್ಮ ವಿವರಗಳ ದೃಢೀಕರಣಕ್ಕೆ ಅಗತ್ಯ ಸಹಕಾರ ನೀಡಬೇಕಾಗಬಹುದು.



