ಭೀಕರ ಅಪಘಾತ: ಬಾಣಂತಿ ಹಾಗೂ 3 ತಿಂಗಳ ಮಗು ಟಿಪ್ಪರ್ ಡಿಕ್ಕಿಗೆ ದುರ್ಮರಣ
ಮೂರು ತಿಂಗಳ ಹಿಂದೆ ಐವರನ್ನು ಬಲಿ ಪಡೆದಿದ್ದ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಮತ್ತೆ ಭೀಕರ ಅಪಘಾತ ಸಂಭವಿಸಿದೆ. ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಬಾಣಂತಿ ಹಾಗೂ ಮೂರು ತಿಂಗಳ ಮಗು ಟಿಪ್ಪರ್ ಡಿಕ್ಕಿಗೆ ಬಲಿಯಾಗಿದ್ದಾರೆ.

ಕಲಬುರಗಿ (Kalburagi News) ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ-ಹಲಕರಟಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಮತ್ತೊಂದು ಭೀಕರ ಅಪಘಾತ (Road Accident) ಸಂಭವಿಸಿದೆ. ಬುಧವಾರ ಮಧ್ಯಾಹ್ನ ನಡೆದ ಈ ದುರ್ಘಟನೆಯಲ್ಲಿ ಬಾಣಂತಿ ತಾಯಿ ಹಾಗೂ ಕೇವಲ ಮೂರು ತಿಂಗಳ ಮಗು ಮೃತಪಟ್ಟಿದ್ದಾರೆ.
ವಾಡಿ ಪಟ್ಟಣದ ಬಸವೇಶ್ವರ ವೃತ್ತ ಬಡಾವಣೆಯ ನಿವಾಸಿ ಶರಣಮ್ಮ ಶರಣು ಸಿಂಗೆ (30) ಹಾಗೂ ಅವರ ಮೂರು ತಿಂಗಳ ಮಗ ರಾಘವೇಂದ್ರ ಮೃತರು. ಆಸ್ಪತ್ರೆಯಿಂದ ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಓವರ್‌ಟೇಕ್ ವೇಳೆ ಟಿಪ್ಪರ್ ಡಿಕ್ಕಿ
ಮೂರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದ ಶರಣಮ್ಮ, ಹೊಲಿಗೆ ಬಿಚ್ಚಿಸಿಕೊಳ್ಳಲು ಅತ್ತೆ ಸಾಬಮ್ಮ ದತ್ತು ಸಿಂಗೆ (50) ಅವರೊಂದಿಗೆ ಬಾಡಿಗೆ ಆಟೋದಲ್ಲಿ ಯಾದಗಿರಿ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಬಳಿಕ ಇಬ್ಬರೂ ಮಗುವಿನೊಂದಿಗೆ ವಾಪಸ್ ಆಗುತ್ತಿದ್ದರು.
ಈ ವೇಳೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ (Tipper Accident), ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಟಿಪ್ಪರ್ ನೇರವಾಗಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದ ರಭಸಕ್ಕೆ ಶರಣಮ್ಮ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಬ್ಬರಿಗೆ ಗಂಭೀರ ಗಾಯ
ಅಪಘಾತದಲ್ಲಿ ಆಟೋದಲ್ಲಿದ್ದ ಶರಣಮ್ಮ ಅವರ ಅತ್ತೆ ಸಾಬಮ್ಮ ಹಾಗೂ ರಾವೂರ ಗ್ರಾಮದ ಆಟೋ ಚಾಲಕ ಖಾಜಾ ಪಟೇಲ್ ಭಾಷಾ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಕೆ. ತಿರುಮಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೂರು ತಿಂಗಳಲ್ಲೇ ಮತ್ತೊಂದು ದುರಂತ
ಇದೇ ಲಾಡ್ಲಾಪುರ-ಹಲಕರಟಿ ಪ್ರದೇಶದಲ್ಲಿ ಮೂರು ತಿಂಗಳ ಹಿಂದೆ ಕ್ರೂಸರ್ ವಾಹನ ಅಪಘಾತಕ್ಕೀಡಾಗಿ ಇಂಗಳಗಿ ಗ್ರಾಮದ ಐವರು ಮೃತಪಟ್ಟಿದ್ದರು. ಆ ಘಟನೆ ಬಳಿಕವೂ ಇದೇ ಭಾಗದಲ್ಲಿ (Highway Accident) ಮತ್ತೊಂದು ಜೀವಹಾನಿ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಅಪಘಾತಗಳು ಪದೇಪದೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿಯಲ್ಲಿ ವೇಗ ನಿಯಂತ್ರಣ ವ್ಯವಸ್ಥೆ, ಅಗತ್ಯ ಸೂಚನಾ ಫಲಕಗಳು ಹಾಗೂ ರಸ್ತೆ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.
‘ಇದು ಸಾವಿನ ಹೆದ್ದಾರಿಯಾಗುತ್ತಿದೆ’ ಎಂದು ಆಕ್ರೋಶ
ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಸ್ತೆ ಸುಧಾರಣೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಒಂದೇ ಪ್ರದೇಶದಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಹಲವು ಜೀವಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಸುರಕ್ಷತೆ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಅಧಿಕಾರಿಗಳು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



