ರಾಜಕೀಯ ಅಖಾಡಕ್ಕೆ ಕ್ರೇಜಿಸ್ಟಾರ್: ಎಂಎಲ್‌ಸಿ ಸ್ಥಾನಕ್ಕೆ ನಟ ರವಿಚಂದ್ರನ್ ನಾಮನಿರ್ದೇಶನ!

ನಟ ರವಿಚಂದ್ರನ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯ ಬಳಿಕ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

  • ರವಿಚಂದ್ರನ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ
  • ಡಿಕೆ ಶಿವಕುಮಾರ್ ಭೇಟಿಯ ಬಳಿಕ ಕುತೂಹಲ
  • MLC ಸ್ಥಾನಕ್ಕೆ ರವಿಚಂದ್ರನ್ ಹೆಸರು ಕೇಳಿಬಂದಿದೆ

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲಿದ್ದಾರೆಯೇ ಎಂಬ ಚರ್ಚೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಅವರನ್ನು ಭೇಟಿಯಾಗಿದ್ದು, ಈ ಭೇಟಿಯ ನಂತರ ಹಲವು ರೀತಿಯ ಮಾತುಗಳು ಹರಿದಾಡುತ್ತಿವೆ.

ರವಿಚಂದ್ರನ್ ಮತ್ತು ಡಿಕೆ ಶಿವಕುಮಾರ್ ಬಾಲ್ಯದ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳು ಎನ್ನಲಾಗಿದ್ದು, ಇಬ್ಬರ ಭೇಟಿಯ ವಿಚಾರವನ್ನು ಡಿಕೆ ಶಿವಕುಮಾರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿತ್ತೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಣವಾಗಿದೆ.

ವಿಧಾನ ಪರಿಷತ್‌ಗೆ ನಾಮನಿರ್ದೇಶನ?

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರವಿಚಂದ್ರನ್ ಅವರ ಸಿನಿಮಾ ಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ, ಅವರನ್ನು ವಿಧಾನ ಪರಿಷತ್‌ಗೆ (MLC Nomination) ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಂಸ್ಕೃತಿಕ ಕ್ಷೇತ್ರದಿಂದ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಪ್ರಸ್ತಾಪಕ್ಕೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಒಪ್ಪಿಗೆ ದೊರೆತಿದೆ ಎಂಬ ವರದಿಗಳೂ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

ಅಧಿಕೃತ ಘೋಷಣೆಗೆ ಕಾಯಬೇಕು

ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಕುರಿತು ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ಹೊರಬರಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಈ ಬೆಳವಣಿಗೆ ಅಧಿಕೃತವಾದರೆ, ಚಿತ್ರರಂಗದಿಂದ ಮತ್ತೊಬ್ಬ ಜನಪ್ರಿಯ ಕಲಾವಿದ ಸಕ್ರಿಯವಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಂತಾಗಲಿದೆ.

ಸದ್ಯಕ್ಕೆ ಇದು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಚರ್ಚೆ ಮತ್ತು ವರದಿಗಳಷ್ಟೇ. ರವಿಚಂದ್ರನ್ ಅವರ ರಾಜಕೀಯ ಪ್ರವೇಶ ಅಥವಾ MLC ಸ್ಥಾನಕ್ಕೆ ನಾಮನಿರ್ದೇಶನದ ಬಗ್ಗೆ ಅಂತಿಮ ನಿರ್ಧಾರ ಏನು ಎಂಬುದು ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories