ಅಪರಿಚಿತ ವಾಟ್ಸ್‌ಆ್ಯಪ್ ಲಿಂಕ್ ಕ್ಲಿಕ್ಕಿಸಿ 3 ಲಕ್ಷ ಕಳೆದುಕೊಂಡ ವ್ಯಕ್ತಿ! ನೀವು ಹುಷಾರ್
ಆರ್‌ಟಿಒ ಚಲನ್ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ ನಕಲಿ APK ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಮೂರು ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ಹೊಸ ರೀತಿಯ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಾಟ್ಸ್‌ಆ್ಯಪ್ ಮೂಲಕ ಬಂದ ಲಿಂಕ್ ನಂಬಿ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಗ್ರಾಮದ ನಿವಾಸಿ ಸೈಯ್ಯದ್ ಮುಬಾರಕ್ ಅವರಿಗೆ ಆರ್‌ಟಿಒ ಚಲನ್ ಹೆಸರಿನಲ್ಲಿ ಅಪರಿಚಿತ ಸಂಖ್ಯೆಯಿಂದ APK ಲಿಂಕ್ ಕಳುಹಿಸಲಾಗಿತ್ತು. ವಾಹನ ದಂಡ ಸಂಬಂಧಿತ ಮಾಹಿತಿ ಇರಬಹುದು ಎಂದು ಭಾವಿಸಿ ಅವರು ಆ ಲಿಂಕ್ ತೆರೆದು ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಸುಮಾರು 3 ಲಕ್ಷ ರೂಪಾಯಿ ಹಣ ಡ್ರಾ ಆಗಿರುವುದು ಗಮನಕ್ಕೆ ಬಂದಿದೆ. ಸೈಬರ್ ವಂಚಕರು ಮೊಬೈಲ್‌ಗೆ ಪ್ರವೇಶ ಪಡೆದು ಬ್ಯಾಂಕಿಂಗ್ ಮಾಹಿತಿಯನ್ನು ಕದಿದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹಣ ಕಳೆದುಹೋದ ವಿಚಾರ ತಿಳಿಯುತ್ತಿದ್ದಂತೆ ಆತಂಕಗೊಂಡ ಸೈಯ್ಯದ್ ಮುಬಾರಕ್ ರಾಮನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ಖದೀಮರ ಪತ್ತೆಗೆ ಮುಂದಾಗಿದ್ದಾರೆ.
ಸೈಬರ್ ತಜ್ಞರು ಅಪರಿಚಿತ APK ಫೈಲ್‌ಗಳು ಅಥವಾ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ RTO, ಬ್ಯಾಂಕ್ ಅಥವಾ ಸರ್ಕಾರದ ಹೆಸರಿನಲ್ಲಿ ಬರುವ ಸಂದೇಶಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.



