Kolar: ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಘಟಕಕ್ಕೆ ಮೋದಿಜಿ ಚಾಲನೆ

ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿತ ದೇಶದ ಮೊದಲ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ವರ್ಚುವಲ್ ಉದ್ಘಾಟನೆ. ವರ್ಷಕ್ಕೆ 10 ಹೆಲಿಕಾಪ್ಟರ್ ಉತ್ಪಾದನೆ ಸಾಧ್ಯತೆ.

  • ಕೋಲಾರದ ವೇಮಗಲ್‌ನಲ್ಲಿ ಮಿನಿ ಹೆಲಿಕಾಪ್ಟರ್ ಘಟಕ
  • ಟಾಟಾ ಏರ್‌ಬಸ್ ಜೋಡಣಾ ಘಟಕ ಪ್ರಾರಂಭ
  • ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ

ಕೋಲಾರ (Kolar): ಚಿನ್ನದ ನಾಡು ಕೋಲಾರ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ (Tata-Airbus mini helicopter) ಅಂತಿಮ ಜೋಡಣಾ ಘಟಕಕ್ಕೆ ಫೆಬ್ರವರಿ 17ರಂದು ಸಂಜೆ 4.20ಕ್ಕೆ ಚಾಲನೆ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ವರ್ಚುವಲ್ ಮೂಲಕ ಘಟಕವನ್ನು ಉದ್ಘಾಟಿಸಲಿದ್ದಾರೆ.

ಈ ಮಹತ್ವದ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಸಹ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೇಮಗಲ್ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್. ರವಿ ಮತ್ತು ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಸುಮಾರು 16 ಎಕರೆ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಿರ್ಮಿಸಿರುವ ಈ ಘಟಕ ದೇಶದಲ್ಲೇ ಮೊದಲ ನಾಗರಿಕ ಮಿನಿ ಹೆಲಿಕಾಪ್ಟರ್ ಜೋಡಣಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಾರಂಭಿಕ ಹಂತದಲ್ಲಿ ವರ್ಷಕ್ಕೆ H125 ಮಾದರಿಯ 10 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಭವಿಷ್ಯದಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಉದ್ದೇಶವೂ ಕಂಪನಿಯದ್ದಾಗಿದೆ.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ಸಮೀಪದಲ್ಲಿರುವುದು ಸ್ಥಳ ಆಯ್ಕೆಗೂ ಪ್ರಮುಖ ಕಾರಣವಾಗಿದೆ. ಈ ಘಟಕ ಆರಂಭದಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ.

Related Stories