ಕರ್ನಾಟಕ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 7 ದಿನ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆ
ಶನಿವಾರ ಕರಾವಳಿ, ಮಲೆನಾಡಿನಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ಇದ್ದು, ಒಳನಾಡಿನ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ತುಂತುರು ಮಳೆ ಸುರಿಯುವ ನಿರೀಕ್ಷೆಯಿದೆ.

- ಏಳು ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ
- ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ
- ಸಂಜೆ, ರಾತ್ರಿ ವೇಳೆ ಬೆಂಗಳೂರು ನಗರದ ಕೆಲವೆಡೆ ಮಳೆ
ಬೆಂಗಳೂರು (Bengaluru): ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಶನಿವಾರವೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ (Karnataka Weather) ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಏಳು ದಿನಗಳಲ್ಲೂ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆಯಿದೆ.
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ನಗರದ ಕೆಲ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ (Rain) ಸುರಿಯಬಹುದು. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 29ರಿಂದ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ರಿಂದ 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಬಹುತೇಕ ಪ್ರದೇಶಗಳಲ್ಲಿ ಶನಿವಾರ ವ್ಯಾಪಕ ಮಳೆ (Widespread Rain) ಸುರಿಯುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮಲೆನಾಡಿನ ಜಿಲ್ಲೆಗಳಲ್ಲೂ ಮಳೆಯ ವಾತಾವರಣ ಮುಂದುವರಿಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಬಹುದು.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ವೇಳೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಉಳಿದ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯುವುದರ ಜೊತೆಗೆ ಕೆಲವೆಡೆ ತುಂತುರು ಮಳೆಯಾಗಬಹುದು.
ಇನ್ನು ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಸುರಿಯುತ್ತಿದ್ದ ಭಾರಿ ಮಳೆ (Heavy Rain) ಇದೀಗ ಕೊಂಚ ಇಳಿಕೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಕಾವೇರಿ ನದಿಯ ನೀರಿನ ಮಟ್ಟವೂ ಇಳಿಮುಖವಾಗಿದೆ. ಭಾರಿ ಮಳೆಯಿಂದ ನೀರು ತುಂಬಿಕೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
ಮಡಿಕೇರಿ ನಗರದಲ್ಲಿ ಸಂಜೆ ವೇಳೆಗೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದ್ದು, ಮಲೆನಾಡಿನ ಭಾಗದಲ್ಲಿ ಮಳೆ ಹಾಗೂ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಮುಂಗಾರು (Monsoon) ಚಟುವಟಿಕೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲೂ ಜಿಲ್ಲಾವಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆಯಿದೆ.



