ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ತಂದೆಯನ್ನೇ ಕೊಂದ ಮಗ! ಭೀಕರ ಕೃತ್ಯ
ಕೋಲಾರದ ಬಂಗಾರಪೇಟೆಯಲ್ಲಿ ಸಾಲ ತೀರಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗ ತಂದೆಯೊಂದಿಗೆ ಜಗಳವಾಡಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. 24 ಗಂಟೆಯಲ್ಲೇ ಆರೋಪಿ ಬಂಧನವಾಗಿದೆ.

ಕೋಲಾರ ಜಿಲ್ಲೆಯ (Kolar News) ಬಂಗಾರಪೇಟೆ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ನಡೆದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ₹75 ಸಾವಿರದ ಕೈಸಾಲ ತೀರಿಸಲು ತಂದೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ವಿಜಯನಗರ ಬಡಾವಣೆಯ ವೆಂಕಟಕೃಷ್ಣ ಬಾಬು (70) ಎಂದು ಗುರುತಿಸಲಾಗಿದೆ. ಇಬ್ಬರು ಪುತ್ರರ ಪೈಕಿ ಹಿರಿಯ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಕಿರಿಯ ಮಗ ಸೀಮೇಶ್ಕರ್ ತಂದೆಯೊಂದಿಗೆ ಬಂಗಾರಪೇಟೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಮಾತಿಗೆ ಮಾತು ಬೆಳೆದು ದುರಂತ
ಸೀಮೇಶ್ಕರ್ ಸುಮಾರು ₹75 ಸಾವಿರ ಕೈಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ತಂದೆಯ ಬಳಿ ಹಣ ನೀಡುವಂತೆ ಪದೇಪದೇ ಕೇಳುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಆ.29ರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ತೀವ್ರಗೊಂಡ ವೇಳೆ ಕೋಪಗೊಂಡ ಸೀಮೇಶ್ಕರ್ ಮನೆಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆಯ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ವೆಂಕಟಕೃಷ್ಣ ಬಾಬು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿತ್ತು. ಆದರೆ, ಚಿಕಿತ್ಸೆಗಾಗಿ ಸಾಗಿಸುವ ಮಾರ್ಗದಲ್ಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರ ದಿಕ್ಕು ತಪ್ಪಿಸಲು ಸುಳ್ಳು ಕಥೆ
ಘಟನೆ ಬಳಿಕ ಸೀಮೇಶ್ಕರ್, ಮನೆಗೆ ಅಪರಿಚಿತರು ನುಗ್ಗಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ರೀತಿಯಲ್ಲಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದನ್ನೂ ಕಳುಹಿಸಲಾಗಿತ್ತು.
ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ತನಿಖೆ ಆರಂಭವಾಯಿತು. ಆದರೆ ಘಟನಾ ಸ್ಥಳದ ಪರಿಸ್ಥಿತಿ, ಗಾಯಗಳ ಸ್ವರೂಪ ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪ್ರಕರಣದ ಬಗ್ಗೆ ಅನುಮಾನ ಮೂಡಿದೆ.
ವಿಚಾರಣೆ ವೇಳೆ ಸತ್ಯ ಬಯಲು
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕುಟುಂಬದೊಳಗಿನ ಹಣಕಾಸಿನ ವಿಚಾರವನ್ನು ಪರಿಶೀಲಿಸಿದರು. ಬಳಿಕ ಸೀಮೇಶ್ಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಂದೆ-ಮಗನ ನಡುವಿನ ಹಣದ ವಿಚಾರದ ಜಗಳವೇ ಹತ್ಯೆಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಗಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಪತ್ತೆಹಚ್ಚಿ ಬಂಧಿಸಿರುವ ಪೊಲೀಸರ ಕಾರ್ಯಾಚರಣೆಗೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



