ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ಕುಸಿದುಬಿದ್ದ ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ಸಾವು

ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚೆಸ್ ಆಟ ವೀಕ್ಷಿಸುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಏಕಾಏಕಿ ಕುಸಿದು ಮೃತಪಟ್ಟಿದ್ದು, ಸಾವಿನ ಕಾರಣದ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

  • SSLC ವಿದ್ಯಾರ್ಥಿ ವಿನಯ್ ಏಕಾಏಕಿ ಕುಸಿದು ಸಾವು
  • ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದಾರುಣ ಘಟನೆ
  • ವಿದ್ಯಾರ್ಥಿ ಸಾವು ಕುರಿತು ಪೋಷಕರಿಂದ ಅನುಮಾನ

ಶಾಲೆಯಲ್ಲೇ ಕುಸಿದುಬಿದ್ದ ವಿದ್ಯಾರ್ಥಿ

ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜಿ.ಕೆ. ವಿನಯ್ (15) ಎಂದು ಗುರುತಿಸಲಾಗಿದೆ.

ಘಟನೆ ವೇಳೆ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದರು. ವಿನಯ್ ಅವರ ಆಟವನ್ನು ನೋಡುತ್ತ ಕುಳಿತಿದ್ದ ಎನ್ನಲಾಗಿದೆ. ಇದೇ ವೇಳೆ ದಿಢೀರ್ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.

ಆಸ್ಪತ್ರೆಗೆ ಕರೆದೊಯ್ದರೂ ಉಳಿಯಲಿಲ್ಲ

ವಿದ್ಯಾರ್ಥಿ ಕುಸಿದುಬಿದ್ದ ತಕ್ಷಣ ಶಿಕ್ಷಕರು ಯಾವುದೇ ಸಮಯ ವ್ಯರ್ಥ ಮಾಡದೆ ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ವಿನಯ್‌ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದರು.

ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ವಿನಯ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಹಠಾತ್ ಸಾವಿನಿಂದ ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ಆಘಾತಕ್ಕೊಳಗಾಗಿದ್ದಾರೆ.

ಮಗನ ಸಾವಿನ ಬಗ್ಗೆ ಪೋಷಕರ ಅನುಮಾನ

ವಿನಯ್‌ನ ತಂದೆ-ತಾಯಿ ಶಿಕಾರಿಪುರದವರಾಗಿದ್ದು, ಆತ ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ವಾಸವಿದ್ದು ಶಾಲೆಗೆ ಹೋಗುತ್ತಿದ್ದ ಎನ್ನಲಾಗಿದೆ. ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿದ್ಯಾರ್ಥಿ ಆರೋಗ್ಯವಾಗಿದ್ದ ವೇಳೆ ಏಕಾಏಕಿ ಕುಸಿದು ಮೃತಪಟ್ಟಿರುವುದರಿಂದ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಹಿಂದಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories