ಚಾಮರಾಜನಗರದಲ್ಲಿ ಹುಲಿ ಕಳೇಬರ ಪತ್ತೆ; ಅರಣ್ಯ ಇಲಾಖೆ ತನಿಖೆ ಚುರುಕು
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದ ಸೂರ್ಯಕಾಂತಿ ತೋಟದಲ್ಲಿ ಹುಲಿ ಕಳೇಬರ ಪತ್ತೆಯಾಗಿದ್ದು, ಸಾವಿನ ಕಾರಣ ತಿಳಿಯಲು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದಲ್ಲಿ ಹುಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ರೈತ ವಿಶ್ವನಾಥ್ ಅವರಿಗೆ ಸೇರಿದ ಸೂರ್ಯಕಾಂತಿ ತೋಟದಲ್ಲಿ ಹುಲಿಯ ಕಳೇಬರ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪ್ರದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ವ್ಯಾಪ್ತಿಗೆ ಬರುತ್ತದೆ.
ತೋಟದ ಕೆಲಸಕ್ಕೆ ತೆರಳಿದ್ದವರು ಹುಲಿ ಮೃತಪಟ್ಟಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಬಂಡೀಪುರದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಹುಲಿಯ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವಿಷಪೂರಿತ ಆಹಾರ ಸೇವನೆಯಿಂದ ಮೃತಪಟ್ಟಿದೆಯೇ ಅಥವಾ ಯಾವುದೇ ಕಾಯಿಲೆ ಅಥವಾ ವಯೋಸಹಜ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಶುವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಿ, ವಿವಿಧ ಮಾದರಿಗಳನ್ನು ಸಂಗ್ರಹಿಸಿದೆ.
ಸಂಗ್ರಹಿಸಿದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. (Forensic Examination) ವರದಿ ಬಂದ ಬಳಿಕವೇ ಹುಲಿಯ ಸಾವಿನ ನಿಖರ ಕಾರಣ ತಿಳಿದುಬರಲಿದೆ. ಸದ್ಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ.
ಈ ಘಟನೆಗೂ ಮುನ್ನ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣವೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆ ಪ್ರಕರಣದಲ್ಲಿ ಹನೂರು ತಾಲೂಕಿನ ಗಾಜನೂರು ಗ್ರಾಮದ ನಾಲ್ವರನ್ನು ಅರಣ್ಯ ಇಲಾಖೆ ಬಂಧಿಸಿತ್ತು.
ಅರಣ್ಯದಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಹುಲಿ ಕೊಂದು ತಿಂದ ಬಳಿಕ, ಅದರ ಕಳೇಬರಕ್ಕೆ ವಿಷ ಬೆರೆಸಲಾಗಿತ್ತು ಎಂಬ ಶಂಕೆ ಆ ಪ್ರಕರಣದಲ್ಲಿ ವ್ಯಕ್ತವಾಗಿತ್ತು. ವಿಷಪೂರಿತ ಮಾಂಸವನ್ನು ತಾಯಿ ಹುಲಿ ಹಾಗೂ ಮರಿಗಳು ಸೇವಿಸಿದ್ದರಿಂದ ಅವು ಮೃತಪಟ್ಟಿರಬಹುದು ಎಂಬ ಅನುಮಾನ ತನಿಖೆಯ ವೇಳೆ ಮೂಡಿತ್ತು. ಇದೀಗ ಬೊಮ್ಮಲಪುರದಲ್ಲಿ ಮತ್ತೊಂದು ಹುಲಿ ಕಳೇಬರ ಪತ್ತೆಯಾಗಿರುವುದು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.



