ಬೈಕ್-ಬಸ್ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
- ಬಸ್ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು
- ದೇವರ ಜಾತ್ರೆಗೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
- ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Yadgiri Road Accident : ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದು, ಅಪಘಾತದ ತೀವ್ರತೆ ಮನಕಲಕುವಂತಹುದು.
ಮೃತಪಟ್ಟವರನ್ನು ಆಂಜನೇಯ ಅಂಬ್ರಣ್ಣ ಸುಬೇದಾರ (35), ಅವರ ಪತ್ನಿ ಗಂಗಮ್ಮ (28), ಪುತ್ರ ಹನುಮಂತ (18 ತಿಂಗಳು), ಪತ್ನಿಯ ಅಣ್ಣನ ಮಕ್ಕಳು ಪವಿತ್ರಾ (5) ಮತ್ತು ರಾಯಪ್ಪ (3) ಎಂದು ಗುರುತಿಸಲಾಗಿದೆ.

ಕುಟುಂಬದ ಸದಸ್ಯರೆಲ್ಲರೂ ಲಿಂಗಸುಗೂರು ತಾಲ್ಲೂಕಿನ ಗುಡಗುಂಟದಲ್ಲಿ ನಡೆಯುತ್ತಿದ್ದ ದೇವರ ಜಾತ್ರೆಗೆ ತೆರಳುತ್ತಿದ್ದರು. ಹಳೆಸಗರದಿಂದ ಬೀದರ್ ಹೆದ್ದಾರಿ ಮಾರ್ಗವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
ಘಟನೆಯಿಂದಾಗಿ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತದ ಪರಿಣಾಮ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸುರಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಂತ್ಯಕ್ರಿಯೆಯು ಮೆಟಮರಡಿ ದೊಡ್ಡಿಯಲ್ಲಿ ನಡೆಯಲಿದೆ. ಇನ್ನುಳಿದ ಇಬ್ಬರು ಮಕ್ಕಳ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.
Tragic Bike-Bus Collision Claims Five Lives from One Family