ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಹರಿದ ಟ್ರಕ್; ಸ್ಥಳದಲ್ಲೇ 7 ಜನರ ಸಾವು

Jharkhand Trailer Accident: ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಸ್ಕೂಟರ್ ಸವಾರನ ನೆರವಿಗೆ ಧಾವಿಸಿದ್ದವರ ಮೇಲೆ ನಿಯಂತ್ರಣ ತಪ್ಪಿದ ಟ್ರೇಲರ್ ಹರಿದಿದ್ದು, ಮಹಿಳೆಯರು ಮತ್ತು ಪುಟ್ಟ ಮಕ್ಕಳು ಸೇರಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ; ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಖುಂಟಿ (Khunti): ರಸ್ತೆ ಬದಿಯ ಪೊದೆಯೊಳಗೆ ಬಿದ್ದಿದ್ದ ಸ್ಕೂಟರ್ ಸವಾರನನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದ ಸಂದರ್ಭದಲ್ಲಿ ಅತಿವೇಗದ ಟ್ರೇಲರ್ ಟ್ರಕ್ (Trailer Truck) ಅವರ ಪಾಲಿಗೆ ಯಮನಂತೆ ಎರಗಿದೆ. ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಈ ಭೀಕರ ಅಪಘಾತದಲ್ಲಿ (Jharkhand Trailer Accident) ಏಳು ಮಂದಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಲನಿ ಸಮೀಪ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪೊದೆಯೊಳಗೆ ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರು ಆತನ ನೆರವಿಗೆ ಧಾವಿಸಿ ಸುತ್ತಲೂ ಸೇರಿದ್ದರು. ಅಷ್ಟರಲ್ಲೇ ತೋರ್ಪಾ ಕಡೆಯಿಂದ ವೇಗವಾಗಿ ಬಂದ ಟ್ರೇಲರ್ ಟ್ರಕ್ ಗುಂಪಿನ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಘಟನೆಯಿಂದ ಬಿರ್ಸಾ ನಾಯಕ್ (Birsa Nayak) ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿದೆ. ಅವರ ಪತ್ನಿ ಕಸಿಲಾ ದೇವಿ, ಪುತ್ರಿ ಅಂಜಲಿ ಮತ್ತು ಕೇವಲ ಒಂದು ವರ್ಷದ ಮೊಮ್ಮಗ ಸೌರಭ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಪುತ್ರಿ ಖುಷ್ಬೂ ಗಂಭೀರವಾಗಿ ಗಾಯಗೊಂಡಿದ್ದು, ಖುಂಟಿ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿರ್ಸಾ ನಾಯಕ್ ತಿಳಿಸಿದ್ದಾರೆ.

ಇತ್ತ ಮತ್ತೊಂದು ಕುಟುಂಬದಲ್ಲೂ ಸಾವು ನೋವು ಸಂಭವಿಸಿದೆ. ರಾಜೇಶ್ ಎಂಬುವವರು ತಮ್ಮ ಪತ್ನಿ ಫಗನ್ ಸಂಗಾ, ತಾಯಿ ಕರ್ಮಿ ಲೋಹ್ರೈನ್ ಹಾಗೂ ಇಬ್ಬರು ಪುತ್ರಿಯರಾದ ಸುಭಾನಿ ಕುಮಾರಿ ಮತ್ತು ಸೋನಿ ಕುಮಾರಿಯನ್ನು ಕಳೆದುಕೊಂಡಿದ್ದಾರೆ. ದುರಂತದ ವಿಪರ್ಯಾಸವೆಂದರೆ, ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡಲು ರಾಜೇಶ್ ಕೇವಲ ಮೂರು ದಿನಗಳ ಹಿಂದಷ್ಟೇ ಗುಜರಾತ್‌ಗೆ ತೆರಳಿದ್ದರು.

ಒಂದು ಕುಟುಂಬದ ಮೂವರು ಹಾಗೂ ಮತ್ತೊಂದು ಕುಟುಂಬದ ನಾಲ್ವರು ಮೃತಪಟ್ಟಿರುವುದು ಇಡೀ ಪ್ರದೇಶದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಗಾಯಗೊಂಡಿರುವ ಖುಷ್ಬೂ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ಆತಂಕದಲ್ಲಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories